*ರಾಜ್ಯದಲ್ಲಿ ಪ್ರತಿದಿನ 67 ಜನ ನಾಪತ್ತೆ! ಇದೇನಾ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಮಾದರಿ?: ಆರ್.ಅಶೋಕ್ ಪ್ರಶ್ನೆ*

ಆಶಾ ಕಾರ್ಯಕರ್ತೆಯರಿಗಿಲ್ಲ ಗ್ಯಾರೆಂಟಿ!
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ಗ್ಯಾರಂಟಿ ಯೋಜನೆ ಬಗ್ಗೆ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 67 ಜನ ನಾಪತ್ತೆಯಾಗುತ್ತಿದ್ದಾರೆ. ಇದೇನಾ ಕರ್ನಾಟಕ ಸರ್ಕಾರದ “ಗ್ಯಾರೆಂಟಿ” ಮಾದರಿ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಹೆಣ್ಣು ಮಕ್ಕಳ ಜೀವಕ್ಕೂ ಗ್ಯಾರೆಂಟಿಯಿಲ್ಲ! ರಾಜ್ಯದಲ್ಲಿ ದಿನಕ್ಕೆ ಸರಾಸರಿ 67 ಜನರು ನಾಪತ್ತೆಯಾಗುತ್ತಿದ್ದಾರೆ. ಮಕ್ಕಳಿಗಿಲ್ಲ ರಕ್ಷಣೆ… ಹೆಣ್ಣುಮಕ್ಕಳಿಗಿಲ್ಲ ಭದ್ರತೆ… ಕರ್ನಾಟಕವನ್ನು ಅಪರಾಧಿಗಳ ಸ್ವರ್ಗವನ್ನಾಗಿ ಮಾಡಿದೆ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳು ರಾಜ್ಯದ ಭಯಾನಕ ವಾಸ್ತವವನ್ನು ಬಯಲಿಗೆಳೆದಿವೆ. ಇದು ಕೇವಲ ಅಂಕಿ-ಅಂಶಗಳ ವರದಿ ಅಲ್ಲ — ಸಾವಿರಾರು ಕುಟುಂಬಗಳ ಕಣ್ಣೀರು ಮತ್ತು ಆತಂಕದ ಕಥೆ.
- 2022ರಲ್ಲಿ 1,110 ಇದ್ದ ಮಕ್ಕಳ ನಾಪತ್ತೆ ಪ್ರಕರಣಗಳು, 2024ರಲ್ಲಿ 1,879ಕ್ಕೆ ಏರಿಕೆ! ಅಂದರೆ ಸುಮಾರು 70% ಏರಿಕೆ.
- 2024ರಲ್ಲಿ ದಾಖಲೆ ಮಟ್ಟದ 15,420 ಮಹಿಳೆಯರು ನಾಪತ್ತೆ! ಹೆಣ್ಣುಮಕ್ಕಳ ಸುರಕ್ಷತೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
- ಕಳೆದ ವರ್ಷವೊಂದರಲ್ಲೇ 551 ಮಕ್ಕಳನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆ ತಂದೆ-ತಾಯಿಗಳ ನೋವಿಗೆ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಅವರ ಬಳಿ ಉತ್ತರ ಇದೆಯೇ?
ಗ್ಯಾರೆಂಟಿಗಳ ಪ್ರಚಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುವ ಸರ್ಕಾರಕ್ಕೆ, ಜನರ ಜೀವ ಮತ್ತು ಮಹಿಳೆಯರ ಸುರಕ್ಷತೆ ಮಾತ್ರ ಆದ್ಯತೆಯೇ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಪೊಲೀಸ್ ಇಲಾಖೆಯನ್ನು ರಾಜಕೀಯ ದ್ವೇಷಕ್ಕೆ ಬಳಸುವುದನ್ನು ಬಿಟ್ಟು, ಅಪರಾಧ ನಿಯಂತ್ರಣಕ್ಕೆ ಬಳಸಿದ್ದರೆ ಇಂದು ಕರ್ನಾಟಕ ಈ ದುಸ್ಥಿತಿಗೆ ಬರುತ್ತಿರಲಿಲ್ಲ. ನಾಪತ್ತೆಯಾಗುತ್ತಿರುವ ಮಕ್ಕಳ ಹೊಣೆ ಯಾರು?ಹೆಣ್ಣುಮಕ್ಕಳ ಭದ್ರತೆ ಎಲ್ಲಿದೆ?ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಎಲ್ಲಿದೆ ?ಎಂದು ಪ್ರಶ್ನಿಸಿದ್ದಾರೆ.
ಜನರ ಭದ್ರತೆಯನ್ನು ಕಾಪಾಡಲು ಸಂಪೂರ್ಣ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಗುಡುಗಿದ್ದಾರೆ.
ನುಡಿದಂತೆ ನಡೆಯದ ಕರ್ನಾಟಕ ಕಾಂಗ್ರೆಸ್ ಸರ್ಕಾರ; ಆಶಾ ಕಾರ್ಯಕರ್ತೆಯರಿಗಿಲ್ಲ ಗ್ಯಾರೆಂಟಿ!
ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಪಕ್ಷದ ಅತೃಪ್ತ ಆತ್ಮಗಳಿಗೆ ಗಂಜಿ ಕೇಂದ್ರ ತೆರೆದು ಕೋಟಿ ಕೋಟಿ ಹಣ ಹಂಚುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ, ಮನೆ ಮನೆಗೆ ತೆರಳಿ ಜನಸೇವೆ ಮಾಡುವ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಹಣವಿಲ್ಲ ಎನ್ನುವುದು ವಿಪರ್ಯಾಸ ಎಂದು ಟಿಕಿಸಿದ್ದಾರೆ.
ಚುನಾವಣೆಗೆ ಮೊದಲು ಭರವಸೆಗಳ ಸುರಿಮಳೆ, ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಕಾರ್ಯಕರ್ತೆಯರ ಶ್ರಮಕ್ಕೆ ಅವಮಾನ — ಇದೇ ಕಾಂಗ್ರೆಸ್ ಸರ್ಕಾರದ ನಿಜ ಮುಖ.
ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರನ್ನು ನಿರ್ಲಕ್ಷಿಸಿರುವುದು ಕ್ಷಮಿಸಲಾಗದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

