Latest

ಪಕ್ಷ ಕೊಟ್ಟ ಶಾಕ್ ನಿಂದ ನಾನು ಹೊರ ಬಂದಿಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತಾರ ಉಡುಪಿ ಶಾಸಕ?

ಪ್ರಗತಿವಾಹಿನಿ ಸುದ್ದಿ; ಉಡುಪಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಟಿಕೆಟ್ ವಂಚಿತರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಹಾಲಿ ಶಾಸಕರು, ಸಚಿವರುಗಳಿಗೇ ಟಿಕೆಟ್ ಕೈತಪ್ಪಿರುವುದು ಕೇಸರಿ ಪಾಳಯದಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ. ಶಾಸಕ ರಘುಪತಿ ಭಟ್ ಅವರಿಗೂ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಉಡುಪಿಯಲ್ಲಿ ಶಾಸಕರು ಕಣ್ಣೀರಿಟ್ಟಿದ್ದಾರೆ.

ಉಡುಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಅವರಿಗೆ ಈಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ, ಇದರಿಂದ ಆಘಾತಗೊಂಡಿರುವ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ. ಸಂಕಷ್ಟ ಕಾಲದಲ್ಲಿ ನಾನು ಬೇಕಾಗಿತ್ತು, ಈಗ ನಾನು ಬೇಡವಾಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಮಾಹಿತಿ ಕೊಡದೇ, ಅಭಿಪ್ರಾಯವನ್ನೂ ಪಡೆಯದೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಅಮಿತ್ ಶಾ ಅವರು ಮಂಗಳೂರಿಗೆ ಬಂದಾಗ ನಮೆಗೆಲ್ಲ ಟಾರ್ಗೆಟ್ ನೀಡಿದ್ದರು. ಅದೆಲ್ಲವನ್ನು ನಾವು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ರಾಜ್ಯ ನಾಯಕರು ಕೂಡ ನಿನ್ನಂತ ಕಾರ್ಯಕರ್ತನಿಗೆ, ಸಿಟ್ಟಿಂಗ್ ಎಂಎಲ್ ಗೆ ಟಿಕೆಟ್ ಕೊಟ್ಟೇ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಟಿಕೆಟ್ ನೀಡಿಲ್ಲ. ಇದನ್ನು ನೋಡಿ ಪಕ್ಷಕ್ಕೆ ನಾನು ಇಷ್ಟು ಬೇಡವಾಗಿ ಬಿಟ್ನಾ? ಎಂದು ಬೇಸರವಾಗುತ್ತಿದೆ. ಟಿವಿಯಲ್ಲಿ ನೋಡಿದ ಮೇಲೆಯೇ ನನಗೆ ಗೊತ್ತಾಗಿದ್ದು. ಒಂದೇ ಒಂದು ಫೋನ್ ಮಾಡಿಯಾದರೂ ಈ ಕಾರಣಕ್ಕಾಗಿ ನಿಮಗೆ ಟಿಕೆಟ್ ಕೊಡುತ್ತಿಲ್ಲ, ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನೀನೇ ಹೇಳು ಎಂದಿದ್ದರೆ ತಕ್ಷಣ ನಾನೇ ಹೇಳಿಬಿಡುತ್ತಿದ್ದೆ ಎಂದು ಭಾವುಕರಾಗಿದ್ದಾರೆ.

ಯಶ್ ಪಾಲ್ ಸುವರ್ಣ ಅವರಿಗೆ ಉಡುಪಿ ಟಿಕೆಟ್ ನೀಡಲಾಗಿದೆ. ಅವರ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ, ಆದರೆ ಪಕ್ಷನ್ನು ತಳಮಟ್ಟದಿಂದ ಸಂಘಟಿಸಿ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಯೂ ಇಂದು ಪಕ್ಷಕ್ಕೆ ನಾನು ಬೇಡವಾದೆನಲ್ಲ ಎಂಬುದು ನೋವಾಗಿದೆ. ಬಿಜೆಪಿ ಇಂದು ಸಾಕಷ್ಟು ಬೆಳೆದಿದೆ. ಕಾರ್ಯಕರ್ತರು ಸಾಕಷ್ಟು ಇದ್ದಾರೆ. ಹಾಗಾಗಿ ಪಕ್ಷಕ್ಕೆ ಇಂದು ನಮ್ಮ ಅವಶ್ಯಕತೆ ಇಲ್ಲದಾಗಿದೆ ಎಂದು ಬೇಸರಿಸಿದರು.

ಇದೇ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಒಂದಂತು ಸ್ಪಷ್ಟ ರೆಡ್ಡಿ ಪಕ್ಷವಾಗಲಿ ಅಥವಾ ಬೇರೆ ಯಾವುದೇ ಪಕ್ಷಕ್ಕಾಗಲಿ ಹೋಗುವುದಿಲ್ಲ. ರಘುಪತಿ ಭಟ್ ಎಂದರೆ ಬಿಜೆಪಿ, ಬಿಜೆಪಿ, ಬಿಜೆಪಿ. ನಾನು ಸಾಯುವಾಗ ಪಕ್ಷದ ಬಾವುಟ ನನ್ನ ಮೇಲೆ ಇರಬೇಕಷ್ಟೇ ಎಂದು ಉದ್ವೇಗದಿಂದ ನುಡಿದಿದ್ದಾರೆ.

ಪಕ್ಷೇತರನಾಗಿ ನಿಲ್ಲಬೇಕೇ ಬೇಡವೇ ಎಂಬ ಬಗ್ಗೆ ಸ್ವತ: ನಾನೇ ನಿರ್ಧಾರ ಮಾಡಬೇಕು. ಇನ್ನೂ ನಾನು ಈಗಾಗಿರುವ ಶಾಕ್ ನಿಂದ ಹೊರ ಬಂದಿಲ್ಲ, ಅದರಿಂದ ಹೊರ ಬಂದು ಮೊದಲು ನಾನು ನಿರ್ಧಾರಮಾಡಬೇಕು. ಒಂದು ವಿಷಯ ನಿಖರವಾಗಿ ಹೇಳುತ್ತೇನೆ. ರಾಜಕಾರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

https://pragati.taskdun.com/bjp-ex-mladoddappagiwda-patilresign/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button