Kannada NewsKarnataka NewsLatestNationalPolitics

*“ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವವರಿಂದ ಡ್ರಗ್ಸ್‌ಮುಕ್ತ ಪಂಜಾಬ್ ಸಾಧ್ಯವೇ?”*: *ಸಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!*

ಪ್ರಗತಿವಾಹಿನಿ ಸುದ್ದಿ: ಪಂಜಾಬ್‌ನಲ್ಲಿ ಮಾದಕವಸ್ತುಗಳ ಸಮಸ್ಯೆ ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವೈಯಕ್ತಿಕ ಅಭ್ಯಾಸಗಳನ್ನೇ ಪ್ರಸ್ತಾಪಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ರಾಜ್ಯವನ್ನು ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಂಗ್ರೂರ್‌ನಲ್ಲಿ ನಡೆದ ‘ಇನ್ಸಾಫ್ ರ್‍ಯಾಲಿ’ಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಗವಂತ್ ಮಾನ್ ಅವರೊಂದಿಗೆ ತಾವು ಲೋಕಸಭೆಯಲ್ಲಿ ಸಂಸದರಾಗಿದ್ದ ದಿನಗಳನ್ನು ನೆನಪಿಸಿಕೊಂಡರು. “ನಾನು ಅವರ ಜೊತೆ ಲೋಕಸಭೆಯಲ್ಲಿದ್ದೆ. ನಮ್ಮ ನಡುವೆ ಕುಳಿತು ಜೋಕ್ ಹೇಳುತ್ತಿದ್ದರು. ಬೆಳಗ್ಗೆ 11 ಗಂಟೆಯ ಹೊತ್ತಿಗೇ ಅವರ ಬಾಯಿಯಿಂದ ಮದ್ಯದ ವಾಸನೆ ಬರುತ್ತಿತ್ತು” ಎಂದು ಆರೋಪಿಸಿದರು.

ಮದ್ಯ ಸೇವಿಸುವುದು ಅವರ ವೈಯಕ್ತಿಕ ವಿಚಾರ. ಅದನ್ನು ತಾನು ಪ್ರಶ್ನಿಸುವುದಿಲ್ಲ ಎಂದ ರಾಹುಲ್, ಆದರೆ ಮಾದಕವಸ್ತುಗಳ ವಿರುದ್ಧ ಹೋರಾಡಬೇಕಾದ ಮುಖ್ಯಮಂತ್ರಿಯೇ ಪ್ರತಿದಿನ ಸಂಜೆ ಅಮಲಿನಲ್ಲಿದ್ದರೆ ಡ್ರಗ್ಸ್ ಸಮಸ್ಯೆಯನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಪಂಜಾಬ್‌ಗೆ ಜನರ ನೋವನ್ನು ಅರ್ಥಮಾಡಿಕೊಳ್ಳುವ ಮತ್ತು ಮಾದಕವಸ್ತುಗಳ ವಿರುದ್ಧ ಪ್ರಾಮಾಣಿಕವಾಗಿ ಹೋರಾಡುವ ನಾಯಕನ ಅಗತ್ಯವಿದೆ ಎಂದರು.

ಇದೇ ವೇಳೆ, ಮೂರು ವರ್ಷಗಳಲ್ಲಿ ಪಂಜಾಬ್ ಅನ್ನು ಡ್ರಗ್ಸ್‌ಮುಕ್ತ ಮಾಡುವುದಾಗಿ ಹೇಳಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದರು. ಮುಂದಿನ ಮೂರು ವರ್ಷಗಳಿರಲಿ, ಇನ್ನೊಂದು ವರ್ಷವೂ ಈ ಸರ್ಕಾರ ಅಧಿಕಾರದಲ್ಲಿ ಉಳಿಯುವುದಿಲ್ಲ. ಆಗ ಅಮಿತ್ ಶಾ ಗೃಹ ಸಚಿವರಾಗಿಯೂ ಇರುವುದಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಪಂಜಾಬ್ ಸರ್ಕಾರವನ್ನು ದೆಹಲಿಯಿಂದ ನಡೆಸುವುದಿಲ್ಲ. ಮುಖ್ಯಮಂತ್ರಿಯೇ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. ಈಗಿನ ಸರ್ಕಾರದ ಆಡಳಿತದ ಚುಕ್ಕಾಣಿ ಅಮಿತ್ ಶಾ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ಹಂಚಿಹೋಗಿದೆ ಎಂದು ವ್ಯಂಗ್ಯವಾಡಿದರು. ರೈತರ ಹಿತಾಸಕ್ತಿ ಮತ್ತು ಆರ್ಥಿಕತೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಆಪ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಕರೆದ ಅವರು, ಪಂಜಾಬ್‌ನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿದರು. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸಂಗ್ರಹವಾಗುವ ಅಕ್ರಮ ಹಣ ದೆಹಲಿಯ ಆಪ್ ನಾಯಕರಿಗೆ ತಲುಪುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಬದಲಾವಣೆಯ ನಿರೀಕ್ಷೆಯಲ್ಲಿ ಮತ ನೀಡಿದ ಜನರಿಗೆ ಆಪ್ ದ್ರೋಹ ಮಾಡಿದೆ ಎಂದರು.

ಇನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಕ್ಷೇತ್ರ ಸಂಗ್ರೂರ್‌ನಲ್ಲೇ ಬೃಹತ್ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ 2027ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.

ರಾಹುಲ್ ಗಾಂಧಿ ಅವರ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನು ಕೀಳುಮಟ್ಟದ ರಾಜಕೀಯ ಎಂದು ಕರೆದಿರುವ ದೆಹಲಿ ಆಪ್ ಅಧ್ಯಕ್ಷ ಸೌರಭ್ ಭಾರದ್ವಾಜ್, ರಾಹುಲ್ ಗಾಂಧಿ ವಿರುದ್ಧವೂ ಹಿಂದೆ ಡ್ರಗ್ಸ್ ಆರೋಪಗಳು ಕೇಳಿಬಂದಿದ್ದವು ಎಂದು ತಿರುಗೇಟು ನೀಡಿದ್ದಾರೆ. ಆಧಾರರಹಿತ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ಹಿರಿಯ ನಾಯಕರಿಗೆ ಇಂತಹ ಮಾತುಗಳು ಶೋಭಿಸುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಪಂಜಾಬ್ ಅನ್ನು ಗುರಿಯಾಗಿಸಿಕೊಂಡಿವೆ ಎಂದೂ ಆಪ್ ಆರೋಪಿಸಿದೆ.

Related Articles

Back to top button