*ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ*: *ಹೋಟೆಲ್ ಗಳಲ್ಲಿ ಆಹಾರ, ಟೀ, ಕಾಫಿ ದರ ಭಾರಿ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಅಕ್ಕಿ, ಬೇಳೆ, ಹಾಲು-ಮೊಸರು, ಬಸ್ ಟಿಕೆಟ್ ದರ ಏರಿಕ್ರೆಯಾಗಿರುವ ನಡುವೆ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ ಎಳೆಯಲಾಗಿದೆ. ಹೋಟೆಲ್ ಗಳಲ್ಲಿ ಟೀ-ಕಾಫಿ ಜೊತೆಗೆ ಆಹಾರಗಳ ದರವೂ ಭಾರಿ ಏರಿಕೆಯಾಗಿದೆ.
ವಿವಿಧ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮದ ಹೊಡೆತ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೂ ಬಿದ್ದಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಕಾರಣ ನಗರದ ಹಲವು ಹೋಟೆಲ್‌ಗಳು ಮೆನು ದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿವೆ.
ಟೀ-ಕಾಫಿ ಮಾತ್ರವಲ್ಲದೆ ಇಡ್ಲಿ, ದೋಸೆಯಂತಹ ಜನಪ್ರಿಯ ತಿಂಡಿ ತಿನಿಸುಗಳ ದರವೂ ಕೆಲವು ಕಡೆ ಭಾರಿ ಹೆಚ್ಚಳವಾಗಿದೆ. ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಅಕ್ಕಿ ಬೆಲೆ ಕೆಜಿಗೆ 95-100 ರೂಪಾಯಿಗೆ
ಕಳೆದ ಒಂದು ತಿಂಗಳಲ್ಲಿ ಅಕ್ಕಿಯ ಬೆಲೆ ಕೆಜಿಗೆ 65 ರೂಪಾಯಿಯಿಂದ ಕೆಲವು ಕಡೆ 95 ರೂಪಾಯಿವರೆಗೆ ಏರಿಕೆಯಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲಿಯರ್ಸ್ ಅಸೋಸಿಯೇಷನ್ (BBHA) ಪ್ರತಿನಿಧಿ ಪಿ.ಸಿ. ರಾವ್ ತಿಳಿಸಿದ್ದಾರೆ.
ಬೇಳೆಕಾಳುಗಳ ಬೆಲೆಯೂ ಹೆಚ್ಚಳವಾಗಿದ್ದು, ಹಾಲು ಮತ್ತು ಮೊಸರಿನ ದರ ಏರಿಕೆಯು ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಹೊರೆ ತಂದಿದೆ ಎಂದು ಅವರು ಹೇಳಿರುವುದಾಗಿವರದಿಯಾಗಿದೆ.
ಈಗಾಗಲೇ ಹಲವು ಹೋಟೆಲ್‌ಗಳು ಮೆನು ದರವನ್ನು ಶೇಕಡ 10ರಿಂದ 15ರಷ್ಟು ಹೆಚ್ಚಿಸಿವೆ.
ಎಲ್ಲಾ ವಸ್ತುಗಳ ಬೆಲೆ ಹೆಚ್ಚಾದಾಗ ಆಹಾರ ಪದಾರ್ಥಗಳ ದರ ಏರಿಸುವುದು ಅನಿವಾರ್ಯವಾಗುತ್ತದೆ ಎಂದು ಉತ್ತರ ಬೆಂಗಳೂರಿನ ಹೋಟೆಲ್ ಉದ್ಯಮಿ ಮಹೇಶ್ ಕೆ. ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ. ಮಧ್ಯಪ್ರಾಚ್ಯದಲ್ಲಿ ಅಶಾಂತಿ ಆರಂಭವಾದ ಬಳಿಕ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಕ್ಕಿ ಮತ್ತು ಹಾಲು ಹೋಟೆಲ್ ಉದ್ಯಮದಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ರಮುಖ ವಸ್ತುಗಳಾಗಿದ್ದು, ಅವುಗಳ ಬೆಲೆ ಏರಿಕೆಯ ಹೊರೆಯನ್ನು ಸಂಪೂರ್ಣವಾಗಿ ಹೋಟೆಲ್ ಮಾಲೀಕರೇ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ತಿಳಿಸಿದ್ದಾರೆ.
ದರ ಏರಿಕೆಯನ್ನು ಕೆಲವು ಗ್ರಾಹಕರು ಅತಿಯಾದ ಕ್ರಮ ಎಂದು ಟೀಕಿಸಿದ್ದಾರೆ. ಒಂದು ಲೀಟರ್ ಹಾಲಿನ ಬೆಲೆ 8 ರೂಪಾಯಿ ಹೆಚ್ಚಾದರೆ, ಪ್ರತಿಯೊಂದು ಟೀ ಅಥವಾ ಕಾಫಿಯ ದರವನ್ನು 5 ರೂಪಾಯಿ ಹೆಚ್ಚಿಸುವುದು ಸರಿಯಲ್ಲ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ. ದರಏರಿಕೆ ನೆಪವಾಗಿಸಿ ಹೋಟೆಲ್ ಗಳಲ್ಲಿ ಆಹಾರ, ಟೀ-ಕಾಫಿ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುಸಿರುವುದು ಗ್ರಾಹಕರ ಮೇಲಿನ ಹೊರೆಯಾಗಿದೆ. ಇದನ್ನು ಕಡಿಮೆ ಮಾಡುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.




