
ಸಚಿವ ಎನ್.ಎಸ್ ಭೋಸರಾಜು ಮಾಹಿತಿ
ಪ್ರಗತಿವಾಹಿನಿ ಸುದ್ದಿ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯಚೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ದೊರೆತಿದೆ. ಕೇಂದ್ರ ಸರಕಾರದ ವಿಮಾನಯಾನ ಸಚಿವರೊಂದಿಗೆ ಹಲವಾರು ಬಾರಿ ನಡೆಸಿದ ಚರ್ಚೆಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಇಂದು ಕೇಂದ್ರ ಸರಕಾರದಿಂದ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ದೊರೆತಿರುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ನಮ್ಮ ಕಾಂಗ್ರೆಸ್ ಸರಕಾರ ರಾಯಚೂರಿನಲ್ಲಿ ನೂತನ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಮಾಡಲು ಬಹಳ ಪ್ರಯತ್ನ ಮಾಡಿತ್ತು. ಅಲ್ಲದೇ, ಆಯವ್ಯಯದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಶೇಷ ಕಾಳಜಿ ವಹಿಸಿ ಕೇಂದ್ರ ಸರಕಾರದೊಂದಿಗೆ ಸಮನ್ವಯ ಮಾಡಿದ್ದರು. ರಾಯಚೂರು ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ವನ್ನು ಸರಕಾರ ನೀಡುವುದಾಗಿಯೂ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಬಗ್ಗೆ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವರಾದ ಎಂ.ಬಿ ಪಾಟೀಲರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಕೂಡಾ ವಿಶೇಷ ಒತ್ತು ನೀಡಿದ್ದರು.
ರಾಯಚೂರು ಸಂಸದರಾದ ಜಿ ಕುಮಾರ ನಾಯ್ಕ್ ನೇತೃತ್ವದ ತಂಡ ಇತ್ತೀಚಿಗೆ ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ವಿಮಾನಯಾನ ಸಚಿವರು ಅಗತ್ಯ ಅನುಮತಿಯನ್ನು ನೀಡಿ ರಾಜ್ಯ ಸರಕಾರಕ್ಕೆ ಪತ್ರಬರೆದಿದ್ದಾರೆ.
ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದಿಂದ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗೆ ಉತ್ತಮ ಸಂಪರ್ಕ ದೊರೆತು, ಸರ್ವತೋಮುಖ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ