
ಪ್ರಗತಿವಾಹಿನಿ ಸುದ್ದಿ: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರಾಯಚೂರು ನಗರದ ಐಬಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್ ವಿವಾಹವಾಗಿದ್ದು, ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು ಎನ್ನಲಾಗಿದೆ. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು ಆದಾಗ್ಯೂ ಕಿರುಕುಳ ಮುಂದುವರೆದಿತ್ತು.
ನಿನ್ನೆ ಸಂಜೆ ಪತಿ ಮಂಜುನಾಥ್ ಕಂಠಪೂರ್ತಿ ಕುಡಿದು ಬಂದು ವಿದ್ಯಾಳನ್ನ ಕೆಲಸದಿಂದ ಕರೆತಂದಿದ್ದ. ಆ ಬಳಿಕ ಮನೆಯಲ್ಲಿ 11 ತಿಂಗಳ ಹಸುಗೂಸಿಗೆ ಹಾಲುಣಿಸಿದ ವಿದ್ಯಾ, ಇದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯೇ ನೇಣುಬಿಗಿದು ಕೊಲೆಗೈದಿರುವುದಾಗಿ ಆರೋಪ ಕೇಳಿಬಂದಿದೆ. ಸದ್ಯ ಮಂಜುನಾಥ್ ಮತ್ತು ಕವಿತಾ ವಿರುದ್ಧ ದೂರು ದಾಖಲಾಗಿದೆ.



