ಗರ್ವ್ ಸೆ ಕಹೋ ಹಮ್ ಹಿಂದೂ ಹೈ ; ರಾಜ್ ನಡಿಗೆ ಹಿಂದುತ್ವದ ಕಡೆಗೆ?

  ಶ್ಯಾಮ್ ಹಂದೆ, ಮುಂಬೈ – 
 ಹಿಂದೂ  ರಾಷ್ಟ್ರದ  ಅಜೆಂಡಾದೊಂದಿಗೆ ಕೆಲಸ ಮಾಡುತ್ತಿರುವ ಸಾಧ್ವಿ ಕಂಚನಗಿರಿ ಇತ್ತೀಚೆಗೆ ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರನ್ನು ಭೇಟಿಯಾದರು. ದೀಪಾವಳಿ ನಂತರ ರಾಜ್ ಅಯೋಧ್ಯೆಗೆ ತೆರಳಲಿದ್ದಾರೆ ಎಂದು ಮನಸೇಯಿಂದ ಘೋಷಣೆ ಕೂಡ ಮಾಡಲಾಯಿತು. ಮುಂಬೈನ ಕೆಲವು ಭಾಗಗಳಲ್ಲಿ ಈ ಭೇಟಿ ಸಂದರ್ಭ ಅಳವಡಿಸಲಾದ ಪೋಸ್ಟರ್‌ಗಳ ಮೇಲೆ ರಾಜ್ ಫೋಟೋ ಮತ್ತು ಅದರ ಕೆಳಗೆ, ‘ಗರ್ವ್ ಸೆ ಕಹೋ ಹಮ್ ಹಿಂದೂ ಹೈ’ ಎಂಬ ವಾಕ್ಯವಿತ್ತು.
ಅಭಿವೃದ್ಧಿ, ಮರಾಠಿ ಮಾಣುಸ್ ಮತ್ತು ಈಗ ಹಿಂದುತ್ವ ಇಂತಹ  ಬದಲಾಗುತ್ತಿರುವ  ಅಜೆಂಡಾದ ಮೇಲೆ ಸವಾರಿ ಮಾಡಿ ರಾಜ್, ರಾಜಕೀಯಕ್ಕೆ ಹುರುಪಿನಿಂದ ಪುನಃ ಮರಳಲು ಸಜ್ಜಾದಂತಿದೆ. ರಾಜಕೀಯದಲ್ಲಿ ಕೆಲವು ‘ಅರ್ಲಿ ಬರ್ಡ್ಸ್’ ಗಳಿರುತ್ತಾರೆ.  ಹಣ್ಣು ತುಂಬಿದ  ಮರದ ಕೆಳಗೆ ಬೆಳ್ಳಂ- ಬೆಳಿಗ್ಗೆ ಹೋಗಿ ಹಣ್ಣನ್ನು ಸವಿಯುತ್ತಾರೆ. ಈ ಹಣ್ಣು ತುಂಬಿದ  ಮರ ಅವರ ಪೂರ್ವಜರು ನೆಟ್ಟ ಗಿಡವಾಗಿರುತ್ತದೆ. ಅದರ  ಸಿದ್ದ  ಹಣ್ಣುಗಳು ಈ ‘ಅರ್ಲಿ ಬರ್ಡ್ಸ್’ ಗಳಿಗೆ  ತಿನ್ನಲು ಸಿಗುತ್ತವೆ. ಕೆಲವು ‘ಲೇಟ್  ಬ್ಲೂಮರ್ಸ ‘ ಅಂದರೆ ತಡವಾಗಿ ಅರಳುವ ಹೂಗಳಂತಿರುತ್ತಾರೆ. ಸುದೀರ್ಘ ಹೋರಾಟದ ನಂತರ, ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ 1995 ರಲ್ಲಿ ಶಿವಸೇನೆಯನ್ನು ಅಧಿಕಾರಕ್ಕೆ ತಂದರು. ಆ ಸಮಯದಲ್ಲಿ, ಬಾಳಾಸಾಹೇಬರಿಗೆ 69 ವರ್ಷ ವಯಸ್ಸಾಗಿತ್ತು. ಅಧಿಕಾರಕ್ಕೆ ಬಂದಾಗ ಅವರು ‘ಲೇಟ್ ಬ್ಲೂಮರ್’ ಆಗಿದ್ದರು. ರಾಜ್ ಅವರಿಗೆ ಪ್ರಸ್ತುತ 53 ವರ್ಷ. ಬಾಳಾಸಾಹೇಬರಿಗೆ ಹೋಲಿಸಿದರೆ, ರಾಜ್ ಇನ್ನೂ ದೊಡ್ಡ ಅವಕಾಶವನ್ನು ಪಡೆಯಬಹುದು. ಶಿವಸೇನೆ ಸ್ಥಾಪನೆಯಾದ 24 ವರ್ಷಗಳ ನಂತರ ಬಾಳಾಸಾಹೇಬರು ಬಿಜೆಪಿ ಎಂಬ ಸ್ನೇಹಿತನನ್ನು ಜೊತೆಗೆ ಸೇರಿಸಿದರು. ಮಹಾರಾಷ್ಟ್ರ ರಾಜಕೀಯದಲ್ಲಿ ಮೈತ್ರಿ ಅಥವಾ ಆಘಾಡಿ ಸದ್ಯದ ಅನಿವಾರ್ಯತೆಯಾಗಿದೆ. ಯಾವುದೇ ಒಂದು ಪಕ್ಷವು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ, ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಈ ಮೊದಲೇ ದೊಡ್ಡ ಜಾಗವನ್ನು ವ್ಯಾಪಿಸಿದ್ದರಿಂದ ಮನಸೇಗೆ ಕಡಿಮೆ ಅವಕಾಶವಿದೆ. ಮೂರು ಪಕ್ಷಗಳು ಈಗಾಗಲೇ ಮಂಟಪದಲ್ಲಿ ಕುಳಿತಿವೆ. ಹಾಗಾಗಿ ಸಂಗಾತಿಯನ್ನು ಹುಡುಕುವುದು ಬಿಟ್ಟು ಮನಸೇಗೆ ಬೇರೆ ಆಯ್ಕೆ ಇಲ್ಲ. ಪ್ರಸ್ತುತ, ಬಿಜೆಪಿಗೆ ರಾಜ್ ಅವರಲ್ಲಿ ಏಕೈಕ ಪರ್ಯಾಯ ಉಳಿದಿದೆ.
ಬಿಜೆಪಿಯಲ್ಲಿ ಎರಡು ಮತಪ್ರವಾಹಗಳಿವೆ:
ಎಂಎನ್ ಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿಯಲ್ಲಿ  ಎರಡು ಮತಪ್ರವಾಹಗಳಿವೆ. ಒಂದು ಮತದ ಪ್ರಕಾರ  ಒಬ್ಬ ಠಾಕ್ರೆ ನಮಗೆ ಬೆನ್ನು ತೋರಿಸಿದರು, ಈಗ ಮತ್ತೊಬ್ಬ ಠಾಕ್ರೆಯನ್ನು ಹತ್ತಿರ ಮಾಡುವುದು ಸರಿಯಲ್ಲ. ಎರಡನೇ ಮತದ ಪ್ರಕಾರ ಮಾತೋಶ್ರಿಗೆ  ತಡೆಗೋಡೆ ನಿರ್ಮಿಸುವುದಿದ್ದರೆ  ಕೃಷ್ಣಕುಂಜ್  ಉಪಯೋಗ ವಾಗಲೂ ಬಹುದು. ಚಿಂತನೆ, ಶಿಸ್ತನ್ನು ಒತ್ತಾಯಿಸುವ  ಬಿಜೆಪಿಗೆ ಅಸಡ್ಡೆ ರಾಜ್‌ನೊಂದಿಗೆ ಎಷ್ಟು ಹೊಂದಾಣಿಕೆಯಾಗಬಹುದು?
ಬಿಜೆಪಿ-ಎಂಎನ್ ಎಸ್ ಮೈತ್ರಿಯಾದಲ್ಲಿ ಮುಂಬೈ, ಥಾಣೆ ಮತ್ತು ಸುತ್ತಮುತ್ತಲಿನ ಪಾಲಿಕಾ ಮತ್ತು ನಾಸಿಕ್ , ಪುಣೆ ಕಾರ್ಪೊರೇಷನ್ ಗಳಲ್ಲಿ ಇಬ್ಬರಿಗೂ  ಲಾಭವಾಗುವ ಸಾಧ್ಯತೆ ಇದೆ. ಯಾವಾಗ ಮಳೆ ಬೀಳಬಹುದು, ಯಾವ ದಿಕ್ಕಿನಲ್ಲಿ ರಾಜಕಾರಣ ತಿರುಗಬಹುದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವುದೇ ಮೈತ್ರಿ ಸಿದ್ಧಾಂತವನ್ನು ಆಧರಿಸಿಲ್ಲ, ಸಿದ್ಧಾಂತದ ಮುಲಾಮು ತಮ್ಮ ಅನುಕೂಲದ ಪ್ರಕಾರ ಬಳಸಲಾಗುತ್ತದೆ.
ರಾಜ್ ಠಾಕ್ರೆ ಬದಲಾಗುತ್ತಿದ್ದಾರೆ
ಜನತಾ ಕಿ ಅದಾಲತ್‌ನಲ್ಲಿಯ ರಾಜ್ ವಿರುದ್ಧದ ದೊಡ್ಡ ಆರೋಪ ಏನೆಂದರೆ ಸಾತತ್ಯದ ಅಭಾವ. ಪ್ರಸ್ತುತ ಅದನ್ನು ತೊಡೆದುಹಾಕಲು ಅವರು ಪ್ರಯತ್ನಿಸುತ್ತಿದ್ದಾರೆ. ” ಪಕ್ಷವನ್ನು ನಡೆಸುವುದಿದ್ದರೆ, ಬೆಳಿಗ್ಗೆ ಬೇಗ ಎದ್ದೇಳಬೇಕಾಗುತ್ತದೆ.” ಎಂದು ಶರದ್ ಪವಾರ್ ಒಮ್ಮೆ ರಾಜ್ ಅವರಿಗೆ ಕಿಚಾಯಿಸಿದ್ದರು. ರಾಜ್ ಯಾವಾಗಲೂ “ಡಿಲೆವರಿಂಗ್ ಎಂಡ್” ನಲ್ಲಿರುತ್ತಾರೆ,  “ರಿಸೀವಿಂಗ್ ಎಂಡ್”  ಗಿರುವುದಿಲ್ಲ. ಅಂದರೆ ಅವರು ಜನರ, ಕಾರ್ಯಕರ್ತರ ಮಾತನ್ನು ಕೇಳುವುದಿಲ್ಲ ಎಂಬ ಆಕ್ಷೇಪವೂ ಇದೆ. ಇದೀಗ ರಾಜ್ ಅವರು ತಮ್ಮನ್ನು ಫಿಲ್ಟರ್ ಮಾಡುತ್ತಿದ್ದಾರೆ ಎಂಬ ಚರ್ಚೆ ಇದೆ. ಅಂದರೆ, ಅವರು ಬೇಗನೆ ಎದ್ದೇಳುತ್ತಾರೆ. ಪ್ರತಿದಿನ ಕಾರ್ಯಕರ್ತರನ್ನು ಭೇಟಿಯಾಗಿ ಅವರ ಮಾತನ್ನು ಕೇಳುತ್ತಾರೆ. ಹಾಗಿದ್ದಲ್ಲಿ, ಅದು ಒಳ್ಳೆಯದು. ಅವರ ಬಳಿ ಮ್ಯಾಗ್ನೇಟ್ ಇದೆ. ಈಗಲೂ ಅವರು ಹೆಚ್ಚು ಜನದಟ್ಟಣೆ ಸೆಳೆಯುವ ನಾಯಕರಾಗಿದ್ದಾರೆ. ಟಿಆರ್ ಪಿ ಇದೆ. ಜನರ ಮನಸ್ಸಿನಲ್ಲಿದ್ದದ್ದನ್ನು  ಮಾತನಾಡುತ್ತಾರೆ. ಅವರ ಪ್ರತಿಯೊಂದು ಕ್ರಿಯೆ ‘ಸಿನಿಮಾ ಟಚ್’ ಹೊಂದಿದೆ. ಆದರೆ ರಾಜಕೀಯ, ಅವಕಾಶಗಳನ್ನು ಹುಡುಕುವ ಕಲೆಯಾಗಿದೆ ಮತ್ತು ಅವಕಾಶಗಳನ್ನು ಹುಡುಕಲು ಯಾವಾಗಲೂ ಸ್ವಲ್ಪ ಜಾಗವಿರಿಸಬೇಕಾಗುತ್ತದೆ. ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ ನಾಳೆ ಬಿಜೆಪಿಯೊಂದಿಗೆ ಹೋದರೆ, ತಮ್ಮ ನಿಲುವಿನ ಬಗ್ಗೆ  ಸಾತತ್ಯದ  ಕೊರತೆಯಿರುವ ನಾಯಕನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬಿಜೆಪಿ ಸಂಪರ್ಕಿಸುವ ಪ್ರಯತ್ನದ ಒಂದು ಭಾಗವಾಗಿ, ಅವರ ನಡಿಗೆ ಹಿಂದುತ್ವದ ಕಡೆಗೆ ಆಗುತ್ತಿದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button