ಪ್ರಗತಿವಾಹಿನಿ ಸುದ್ದಿ; ಜೈಪುರ್: ರಾಜಸ್ಥಾನ ರಾಜಕೀಯ ಅಸ್ಥಿರತೆ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡವಿದೆ. ಉಪಮುಖ್ಯಮಂತ್ರಿ ಸಚಿನ್ ಪೈಲಟ್ ತೋರಿಕೆಗೆ ಮಾತ್ರ. ಅವರ ಕೈಯಲ್ಲಿ ಏನೂ ಇಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಹೋಟೇಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ, ಡಿಸಿಎಂ ಮತ್ತು ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಟ್ಟು ಬದಲಿ ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಚರ್ಚಿಸಿದರು.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಗೆಹ್ಲೋಟ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಸಂಚು ರೂಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸಾಕಷ್ಟು ಬಾರಿ ಈ ಪ್ರಯತ್ನಗಳು ನಡೆದಿದೆ ಎಂದು ಗೆಹ್ಲೋಟ್ ಆರೋಪಿಸಿದರು.
ಕುದುರೆ ವ್ಯಾಪಾರದ ಭಾಗವಾಗಿ ಹಲವು ಶಾಸಕರೊಂದಿಗೆ ಸಚಿನ್ ಪೈಲಟ್ ದೆಹಲಿಗೆ ತೆರಳಿದ್ದರು. ಇಲ್ಲಿ ಸಚಿನ್ ಪೈಲಟ್ ತೋರಿಕೆಗೆ ಮಾತ್ರವಿದ್ದು, ಶಾಸಕರಿಗೆ ರೆಸಾರ್ಟ್ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಮಾಡಿಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲೂ ಇದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ