ಪ್ರಗತಿವಾಹಿನಿ ಸುದ್ದಿ; ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಮೂರು ಆಡಿಯೋ ಲೀಕ್ ಆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ಇಬ್ಬರು ಶಾಸಕರನ್ನು ಅಮಾನತುಗೊಳಿಸಿದೆ.
ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡಾಯವೆದ್ದು, ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂದು ಕೈನಾಯಕರು ಆರೋಪಿಸಿದ್ದಾರೆ. ಈ ನಡುವೆ ಮೂರು ಆಡಿಯೋಗಳು ಬಿಡುಗಡೆ ಆಗಿದ್ದು, ಇದರಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಗಜೇಂದ್ರ ಶೆಖಾವತ್ ಜೊತೆ ಕೈಪಾಳಯದ ರೆಬೆಲ್ ಶಾಸಕರು ಮಾತನಾಡಿರುವುದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಇಬ್ಬರು ಶಾಸಕರನ್ನು ಅಮಾನತುಗೊಳಿಸಿದೆ. ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಅವರು ಅಮಾನತಾದ ಕಾಂಗ್ರೆಸ್ ಶಾಸಕರು.
ಇದೇ ವೇಳೆ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಗಜೇಂದ್ರ ಶೆಖಾವತ್ ಮತ್ತು ಇಬ್ಬರು ರೆಬೆಲ್ ಕಾಂಗ್ರೆಸ್ ಶಾಸಕರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸೋರಿಕೆಯಾದ ಧ್ವನಿಮುದ್ರಿಕೆಯ ಆಧಾರದ ಮೇಲೆ ರಾಜಸ್ಥಾನದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಸ್ಪೆಷಲ್ ಆಪರೇಷನ್ ಗ್ರೂಪ್ನಿಂದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ಬಂಡಾಯ ನಾಯಕ ಸಚಿನ್ ಪೈಲಟ್ ಅವರು ತಾವು ಸರ್ಕಾರವನ್ನು ಬೀಳಿಸುವ ಉದ್ದೇಶ ಹೊಂದಿಲ್ಲ. ಬಿಜೆಪಿಯನ್ನೂ ಸೇರುವುದಿಲ್ಲ ಎಂದು ಎರಡು ದಿನಗಳಿಂದಲೂ ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ಆದರೆ, ಈಗ ಸೋರಿಕೆಯಾಗಿರುವ ಆಡಿಯೋ ಹಾಗೂ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಬಗ್ಗೆ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ