ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿ ಎಲ್ ಸಂತೋಷ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ಅವರ ನಾಯಕತ್ವವನ್ನು ಎಲ್ಲರೂ ಒಪ್ಪಿದ್ದಾರೆ. ಒಪ್ಪಿಲ್ಲ ಎಂದು ಯಾರೂ ಹೇಳಲಾಗದು. ಬಿ ಎಸ್.ಯಡಿಯೂರಪ್ಪ ಸಿಎಂ ಆಗಲೂ ಸಂತೋಷ್ ಕಾರಣ. ಈಗ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲೂ ಸಂತೋಷ್ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಪಟ್ಟಿಗಳನ್ನು ಮಾಡಿ ಹೈಕಮಾಂಡ್ ಗೆ ಕಳುಹಿಸಿತ್ತು. ಅದರಲ್ಲಿ ಈರಣ್ಣ ಹಾಗೂ ಅಶೋಕ್ ಹೆಸರನ್ನು ಸಂತೋಷ್ ಅವರು ಅಂತಿಮಗೊಳಿಸಿ ಸೂಚಿಸಿದ್ದಾರೆ. ಇಬ್ಬರುಬ್ಬರು ಸಾಮಾಯ ಕಾರ್ಯಕರ್ತರಿಗೆ ರಾಜ್ಯಸಭೆಗೆ ಅವಕಾಶ ನೀಡಲಾಗಿದೆ. ಸಂತೋಷ್ ನಮ್ಮ ವರಿಷ್ಠರು, ಬಿಜೆಪಿಗೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಹೇಗೋ ಹಾಗೇ ಸಂತೋಷ್. ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಒಪ್ಪಲೇ ಬೇಕು ಎಂದು ಹೇಳಿದರು.
ಇನ್ನು ಲಾಬಿ ರಾಜಕೀಯದಲ್ಲಿ ಇರುತ್ತೆ. ಮೂಗು ಇರುವವರೆಗೂ ನೆಗಡಿ ಇರುತ್ತೆ. ನೆಗಡಿ ಬಂದಿದೆ ಎಂದು ಮೂಗು ಕುಯ್ದುಕೊಳ್ಳುವ ಕೆಲಸವನ್ನು ಯಾರೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದಿದ್ದಾರೆ.
ರಾಜ್ಯಸಭೆಯ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳಾಗಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಆಯ್ಕೆ ಮಾಡಿರುವುದು ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಯ ವಿಷಯವಾಗಿದ್ದು, ಕಮಲಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಹಾಗೂ ರಾಜ್ಯ ಬಿಜೆಪಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೈಕಮಾಡ್ ಈ ಇಬ್ಬರನ್ನು ನೇರವಾಗಿ ಆಯ್ಕೆ ಮಾಡಿದೆ ಎಂಬ ಮಾತು ಕೇಳುಬರುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ