ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಈ ನಡುವೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.
ಮತದಾನದ ವೇಳೆ ಹೆಚ್.ಡಿ.ರೇವಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬ್ಯಾಲೆಟ್ ಪೇಪರ್ ತೋರಿಸಿ ಮತ ಹಾಕಿದ್ದಾರೆ. ಹೀಗಾಗಿ ಅವರ ಮತವನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹೆಚ್.ಡಿ.ರೇವಣ್ಣ, ಕೋಮುವಾದಿ ಪಕ್ಷ ನಮ್ಮ ವಿರುದ್ಧ ವೃಥಾ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಜತೆ ಸೇರಿಕೊಂಡು ಜೆಡಿಎಸ್ ವಿರುದ್ಧ ಇಂತಹ ಆರೋಪ ಮಾಡುವುದು ಸರಿಯಲ್ಲ. ನಾನು ಬ್ಯಾಲೆಟ್ ಪೇಪರ್ ನ್ನು ಡಿ.ಕೆ.ಶಿವಕುಮಾರ್ ಅವರಿಗೆ ಯಾಕೆ ತೋರಿಸಲಿ? ಒಂದು ವೇಳೆ ಹಾಗೆ ಮಾಡಿದ್ದರೆ ಸ್ಥಳದಲ್ಲೇ ಬಿಜೆಪಿಯವರು ಆಕ್ಷೇಪ ಮಾಡಬೇಕಿತ್ತು. ಬ್ಯಾಲೆಟ್ ಪೇಪರ್ ಡಿಕೆಶಿಗೆ ತೋರಿಸಿದ್ದೇನೆ ಎನ್ನುವುದಾದರೆ ಈ ಕುರಿತ ದೃಶ್ಯ ತೋರಿಸಲಿ ಎಂದು ಹೇಳಿದ್ದಾರೆ.
ನಾನು ಬ್ಯಾಲೆಟ್ ಪೇಪರ್ ನ್ನು ಡಿಕೆಶಿಗೆ ತೋರಿಸಿಲ್ಲ. ನಮ್ಮ ಪಕ್ಷದ ಸೂಚಕರಿಗೆ ತೋರಿಸಿ ಮತಹಾಕಿದ್ದೇನೆ. ನಮ್ಮ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ನಾಯಕರೊಂದಿಗೆಸೇರಿಕೊಂಡು ಬಿಜೆಪಿ ಇಂತಹ ಆರೋಪ ಮಾಡುತ್ತಿದೆ ಎಂದು ಗುಡುಗಿದ್ದಾರೆ.
ಕುತೂಹಲ ಮೂಡಿಸಿದ ರಾಜ್ಯಸಭಾ ಚುನಾವಣೆ; ಮತದಾನ ಪ್ರಕಿಯೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ