Latest

ರಾಜ್ಯೋತ್ಸವ ಪ್ರಶಸ್ತಿ: 28,857 ಜನರಿಂದ ಶಿಫಾರಸ್ಸು

2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210  ಅರ್ಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ  ಮೊದಲ ಬಾರಿ ಆನ್ ಲೈನ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾರ್ವಜನಿಕರೇ ಶಿಫಾರಸ್ಸು ಮಾಡಲು ಅವಕಾಶ ನೀಡಲಾಗಿತ್ತು. “ಸೇವಾ ಸಿಂಧು” ಮೂಲಕ ಎಲೆಮರೆಯ ಸಾಧಕರನ್ನು ಸಾರ್ವಜನಿಕರು ಗುರುತಿಸುವ ಅವಕಾಶ ಮಾಡಿ ಕೊಡಲಾಗಿತ್ತು.  ಈ ಪ್ರಕ್ರಿಯೆಗೆ ನಾಡಿನ ಜನರು ಭಾರಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಕಳೆದ ಮೂರು ವರ್ಷಗಳ ಪೈಕಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಜನರ ಸ್ಪಂದನೆ ಹೆಚ್ಚಾಗಿದೆ.  2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210  ಅರ್ಜಿಗಳು ಇಲಾಖೆಗೆ ಬಂದಿವೆ. ಅವುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಗೆ ಭೌತಿಕ 1450 ಅರ್ಜಿಗಳು ಹಾಗೂ `ಸೇವಾ ಸಿಂಧು’ ಮೂಲಕ 4770 ಹೆಸರುಗಳು ಬಂದಿದ್ದು ಅವುಗಳನ್ನು  28,857 ಜನರು ಆನ್ಲೈನ್ ಮೂಲಕ ಶಿಫಾರಸ್ಸು ಮಾಡಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ನಾಟಕ, ಕ್ರೀಡೆ, ಕೃಷಿ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ 26 ಕ್ಷೇತ್ರಗಳಲ್ಲಿ ಸಾಧಕರ ಅರ್ಜಿಗಳು ಬಂದಿವೆ.
2018-19ನೇ ಸಾಲಿನ 63ನೇ ರಾಜ್ಯೋತ್ಸವ ಪ್ರಶಸ್ತಿಗೆ 1300 ಅರ್ಜಿಗಳು ಬಂದಿದ್ದವು. 2019-20ನೇ ಸಾಲಿನ 64ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1191 ಅರ್ಜಿಗಳು  ಹಾಗೂ 2020-21ನೇ ಸಾಲಿನ 65ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1144 ಅರ್ಜಿಗಳು ಬಂದಿದ್ದವು.
ಕಳೆದ ಮೂರು ವರ್ಷಗಳ ಅಂಕಿಸಂಖ್ಯೆಗಳನ್ನು  ಗಮನಿಸಿದಾಗ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸ್ಪಂದಿಸಿದ್ದು ಕಂಡುಬಂದಿದೆ. ಅದರಂತೆ ಆನ್ಲೈನ್ ವ್ಯವಸ್ಥೆ ಮಾಡಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ನೇರವಾಗಿ ಭಾಗಿಯಾಗಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚಿನ ಗೌರವ ತಂದಿದೆ.  ಜೊತೆಗೆ ಈ ಬಾರಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button