Kannada NewsKarnataka NewsLatest
ಮಹಾ ಸಚಿವರೊಂದಿಗೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ರಮೇಶ್ ಜಾರಕಿಹೊಳಿ, ಗಣೇಶ ಹುಕ್ಕೇರಿ

ಪ್ರವಾಹ ನಿರ್ವಹಣೆ -ಮಾಹಿತಿ ವಿನಿಮಯ ಕುರಿತು ಮಹಾರಾಷ್ಟ್ರದ ಸಚಿವರ ಜತೆ ಚರ್ಚೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವರಾದ ರಾಜೇಂದ್ರ ಪಾಟೀಲ ಯಡ್ರಾವಕರ್ ಜೊತೆಗೆ ಶನಿವಾರ ಇಚಕರಂಜಿಯ ಪಂಚಗಂಗಾ ನದಿ ಸೇತುವೆ ಪರಿಶೀಲಿಸಿದರು.


ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾದರೆ ನೀರು ಬಿಡುಗಡೆ ಮಾಡುವ ಮುಂಚೆ ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡಬೇಕು ಎಂದು ಸಚಿವ ಜಾರಕಿಹೊಳಿ ಮನವಿ ಮಾಡಿಕೊಂಡರು.

ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದರಲ್ಲದೇ ಬಹಳಷ್ಟು ಹಾನಿ ಉಂಟಾಗಿತ್ತು. ಆದ್ದರಿಂದ ಈ ಬಾರಿ ಕರ್ನಾಟಕ ಸರ್ಕಾರದ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿರುತ್ತದೆ.
ಮಳೆಯ ಪ್ರಮಾಣ, ಜಲಾಶಯಗಳ ಮಟ್ಟ ಮತ್ತು ನೀರು ಬಿಡುಗಡೆಗೆ ಕುರಿತು ಎರಡೂ ರಾಜ್ಯಗಳು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ತಿಳಿಸಿದರು.

ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಜೊಳಿ ಅವರು ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ನೀರಿನ ಹರಿವು ಪರಿಶೀಲಿಸಿದರು.

ಇದೇ ವೇಳೆ ಎನ್.ಡಿ.ಆರ್.ಎಫ್. ತಂಡದ ಜತೆ ಬೋಟ್ ನಲ್ಲಿ ಸಂಚರಿಸಿ ತುರ್ತು ಪರಿಸ್ಥಿತಿ ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಖುದ್ದಾಗಿ ಮಾಹಿತಿಯನ್ನು ಪಡೆದುಕೊಂಡರು.
ಕಲ್ಲೋಳ-ಯಡೂರ ಬ್ಯಾರೇಜ್, ಶಮನೇವಾಡಿ ಸೇತುವೆ ಸೇರಿದಂತೆ ವಿವಿಧ ಕಡೆ ಸಚಿವರು ಭೇಟಿ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, “ಕಳೆದ ಬಾರಿಗಿಂತ ಈ ಬಾರಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ. ಆದ್ದರಿಂದ ನದಿತೀರದ ಗ್ರಾಮಸ್ಥರು ಆತಂಕಪಡಬೇಕಿಲ್ಲ” ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಅಧಿಕಾರಿಗಳು ನೆರೆಯ ಮಹಾರಾಷ್ಟ್ರದ ಜತೆ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ನದಿತೀರದ ಗ್ರಾಮಗಳಲ್ಲಿ ಜನರ ತುರ್ತು ರಕ್ಷಣೆಗೆ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಳೆದ ವರ್ಷದಂತೆ ಪರಿಹಾರ ಕೇಂದ್ರಗಳ ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರಿಗೆ ವಿವರಿಸಿದರು.
ಇದಲ್ಲದೇ ಯಡೂರ ಗ್ರಾಮದಲ್ಲಿ ಎನ್.ಡಿ.ಆರ್.ಎಫ್. ತಂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.