ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮಾಜಿ ಸಚಿವರ ವಿಚಾರಣೆ ನಡೆಸಿದ್ದಾರೆ. ಸಿಡಿ, ಆಡಿಯೋ ಕ್ಲಿಪ್ ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿಯವರನ್ನು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಸಿಡಿಯಲ್ಲಿರುವುದು ನಾನಲ್ಲ, ಅದು ನನ್ನ ಧ್ವನಿಯೂ ಅಲ್ಲ. ಯುವತಿ ಯಾರೆಂಬುದೂ ನನಗೆ ತಿಳಿದಿಲ್ಲ. ಇನ್ನು ಹಣದ ವಿಷಯವಾಗಿ ಯಾರೂ ಯವೌದೇ ಬೇಡಿಕೆಯನ್ನೂ ಇಟ್ಟಿಲ್ಲ, ಅದೊಂದು ನಕಲಿ ವಿಡಿಯೋ ಎಂದು ಹೇಳಿದ್ದಾರೆ.
ಮಾಜಿ ಪತ್ರಕರ್ತ ನರೇಶ್ ಸೇರಿದಂತೆ ಇತರರ ಬಗ್ಗೆಯೂ ತನಗೆ ಪರಿಚಯವಿಲ್ಲ ಎಂದಿರುವ ಜಾರಕಿಹೊಳಿ 2+3+4 ಷಡ್ಯಂತ್ರದ ಬಗ್ಗೆಯೂ ಗೊತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಗೊತ್ತಾಗಿತ್ತು. ಆದರೆ ನಾನದನ್ನು ನಿರ್ಲಕ್ಷಿಸಿದ್ದೆ. ನನಗೆ ಗೊತ್ತಿರುವ ಮಾಹಿತಿ ಇಷ್ಟು. ನಿಮ್ಮ ಕೆಲವು ಪ್ರಶ್ನೆಗಳಿಗೆ ವಕೀಲರನ್ನು ಕೇಳಿ ಉತ್ತರಿಸುತ್ತೇನೆ. ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ನಾಲ್ಕು ಗಂಟೆ ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿಗೆ 56 ಪ್ರಶ್ನೆ ಕೇಳಲಾಗಿದ್ದು, ಎಸ್ ಐಟಿ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸೇರಿದಂತೆ ಹಲವು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೆಲ ಪ್ರಶ್ನೆಗಳಿಗೆ ಮಾಜಿ ಸಚಿವರು ಗಾಬರಿಯಾಗಿ ಕಸಿವಿಸಿಗೊಂಡಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ