ರಮೇಶ ಕತ್ತಿ ರಾಜಿನಾಮೆ; ಮುಂದಿನ ನಿರ್ಧಾರ ನಾಲ್ವರಿಗೆ ಅಧಿಕಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜಿನಾಮೆ ನೀಡಿದ್ದಾರೆ. ಇದರಿಂದಾಗಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎದ್ದಂತಾಗಿದೆ.
ಒಟ್ಟೂ 17 ನಿರ್ದೇಶಕರ ಪೈಕಿ 15 ಜನರು ರಮೇಶ ಕತ್ತಿ ವಿರುದ್ಧ ನಿಂತ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನಿರ್ಧಾರ ತೆಗೆದುಕೊಂಡರು ಎಂದು ಗೊತ್ತಾಗಿದೆ.
ಕಳೆದ ಲೋಕಸಭಾ ಚುನಾವಣೆಯ ನಂತರ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ರಮೇಶ ಕತ್ತಿ ಚಿಕ್ಕೋಡಿಯ ಬಿಜೆಪಿಯ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ವಿರುದ್ಧ ಕೆಲಸ ಮಾಡಿದ್ದರು ಎನ್ನುವ ಆರೋಪವಿತ್ತು. ಇದಾದ ನಂತರ ಅಣ್ಣಾ ಸಾಹೇಬ ಜೊಲ್ಲೆ ಸಿಡಿದೆದ್ದಿದ್ದರು.
ಜೊತೆಗೆ ಕಮಿಟಿಯ ಎಲ್ಲ ನಿರ್ದೇಶಕರೂ ರಮೇಶ ಕತ್ತಿ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಸಿಡಿದೆದ್ದಿದ್ದರು. ಬ್ಯಾಂಕಿನ ಸಿಬ್ಬಂದಿ ಕೂಡ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಇದೀಗ 15 ಸದಸ್ಯರು ರಮೇಶ ಕತ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ರಮೇಶ ಕತ್ತಿ ರಾಜಿನಾಮೆ ನೀಡಿ ಹೊರಬಿದ್ದಿದ್ದಾರೆ. ನಿನ್ನೆ 14 ನಿರ್ದೇಶಕರು ಸಭೆ ಸೇರಿದ್ದರು. ಈ ಸಭೆಗೆ ಲಕ್ಷ್ಮಣ ಸವದಿ ಗೈರಾಗಿದ್ದರೂ, ಬೆಂಬಲ ಸೂಚಿಸಿದ್ದರು. ಅಲ್ಲಿಗೆ ಗಜಾನನ ಕ್ವಳ್ಳಿ ಒಬ್ಬರನ್ನು ಹೊರತುಪಡಿಸಿದರೆ ಉಳಿದೆಲ್ಲರೂ ರಮೇಶ ಕತ್ತಿ ವಿರುದ್ಧ ಧ್ವನಿ ಎತ್ತಿದ್ದರು.
ನಾಲ್ವರಿಗೆ ಅಧಿಕಾರಿ
ರಮೇಶ ಕತ್ತಿ ರಾಜಿನಾಮೆಯಿಂದ ತೆರವಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆನ್ನುವ ಕುರಿತು ನಿರ್ಧರಿಸುವ ಅಧಿಕಾರವನ್ನು ನಾಲ್ವರಿಗೆ ನೀಡಲಾಗಿದೆ. ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಹಾಗೂ ಮಹಾಂತೇಶ ದೊಡ್ಡಗೌಡರ್ ಅವರು ಮುಂದಿನ ಅಧ್ಯಕ್ಷರ ಆಯ್ಕೆ ಮಾಡಲು ಅಧಿಕಾರ ನೀಡಲಾಗಿದೆ.
ಈ ಬೆಳವಣಿಗೆಯಿಂದಾಗಿ ಬೆಳಗಾವಿ ಜಿಲ್ಲೆಯ ರಾಜಕಾರಣಕ್ಕೆ ದೊಡ್ಡ ತಿರುವು ಸಿಕ್ಕಿದಂತಾಗಿದೆ. ಜಿಲ್ಲೆಯ ರಾಜಕಾರಣಕ್ಕೆ ಹಿಂದಿನಿಂದಲೂ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜಕೀಯ ಹಿನ್ನೆಲೆಯಾಗುತ್ತ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ