ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತನ್ನ ಮೇಲೆ ಬಂದಿರುವ ಆರೋಪಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಸರಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಎನ್ನುವ ಬಿಜೆಪಿ ನಾಯಕರು ಆ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ತನಿಖೆ ಎದುರಿಸಲು ನಾವೆಲ್ಲ ಸಿದ್ದರಿದ್ದೇವೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ ಸವಾಲೆೆಸೆದಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಸರಕಾರ ಯಾವರೀತಿಯಲ್ಲಿ ವರ್ತಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪರಿಸ್ಥಿತಿ ನಿರ್ವಹಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅಷ್ಟೇ ಅಲ್ಲ ಅವ್ಯವಹಾರ ತಡೆಯುವಲ್ಲೂ ವಿಫಲವಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಎಂದು ನಾವು ಹೇಳುವುದು ತಪ್ಪಾ ಎಂದು ಪ್ರಶ್ನಿಸಿದರು.
ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೇರೆಯವರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ವಿರುದ್ಧ ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಅದಕ್ಕೆ ಯಾರೂ ಬೇಡ ಎಂದಿಲ್ಲ. ತನಿಖೆ ಎದುರಿಸಲು ನಾವೂ ಸಿದ್ದರಿದ್ದೇವೆ. ಅದನ್ನು ಬಿಟ್ಟು ಸುಮ್ಮನೇ ಗೂಬೆಕೂರಿಸುವುದು ಸರಿಯಲ್ಲ ಎಂದು ರಮೇಶಕುಮಾರ ಹೇಳಿದರು.
ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಯಾವರೀತಿಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿ ಭ್ರಷ್ಟಾಚಾರ ಮಾಡಲಾಗಿದೆ ಎನ್ನುವುದನ್ನು ನಾವು ಬಹಿರಂಗಪಡಿಸಿದ್ದೇವೆ. ಅದು ಸುಳ್ಳೆಂದಾದರೆ ತನಿಖೆ ನಡೆಸಿ ಸಾಬೀತುಪಡಿಸಿ. ಅದನ್ನು ಬಿಟ್ಟು ನಮ್ಮ ಮೇಲೆಯೇ ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಮಾರುಕಟ್ಟೆ ದರಕ್ಕಿಂತ ಎಷ್ಟೋ ಪಟ್ಟು ಹಣ ಕೊಟ್ಟು ಸಲಕರಣೆ ಖರೀದಿಸಿರುವುದು ಎಲ್ಲರಿಗೂ ಕಾಣುತ್ತಿದೆ. ಆದರೂ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿವುದು ಸರಿಯೇ ಎಂದು ರಮೇಶ ಕುಮಾರ ಪ್ರಶ್ನಿಸಿದರು.
ಕೊರೊನಾ ನಿಯಂತ್ರಣ ಹೆಸರಿನಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡಿವಾಣ ಹಾಕಿವೆ. ಸಭೆ, ಸಮಾರಂಭ ನಿಷೇಧಿಸಲಾಗಿದೆ. ದೇವಸ್ಥಾನದ ಬಾಗಿಲುಗಳೂ ಮುಚ್ಚಿಸಲ್ಪಟ್ಟಿವೆ. ಇಂತಹ ಪರಿಸ್ಥಿತಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಅದ್ದೂರಿಯಾಗಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಹೊರಟಿರುವ ಬಿಜೆಪಿ ಅವರನ್ನು ಆ ಶ್ರೀರಾಮನೇ ಕಾಪಾಡಬೇಕು ಎಂದರು ಅವರು.
ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ