ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾಝ್ ಮುನೀರ್ ಕೈವಾಡ ದೃಢ ಪಟ್ಟಿದೆ ಎಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಮಾಝ್ ಮುನೀರ್ ಕೈವಾಡವಿರುವ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಝ್ ಮುನೀರ್ ನನ್ನು ಎನ್ ಐಎ ವಶಕ್ಕೆ ಪಡೆದು ಬಂಧಿಸಿತ್ತು. ಶಿವಮೊಗ್ಗದ ತೀರ್ಥ ಹಳ್ಳಿ ಮೂಲದ ಮಾಝ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಜೈಲು ಸೇರಿದ್ದ.
ಮಾರ್ಚ್ 1ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ನಿಟ್ಟಿನಲ್ಲಿ ಎನ್ ಐಎ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿ ಮಾಝ್ ಮುನೀರ್ ನನ್ನು ವಶಕ್ಕೆ ಪಡೆದಿದ್ದರು. ಜೈಲಿನ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದಾಗ ಆತನ ಕೊಠಡಿಯಲ್ಲಿ ಮಹತ್ವದ ದಾಖಲೆಗಳು, ನೋಟ್ ಬುಕ್ ನಲ್ಲಿ ಕೆಲ ಕೋಡ್ ವರ್ಡ್ ಗಳು ಪತ್ತೆಯಾಗಿದ್ದವು. ಜೈಲಿನಲ್ಲಿದ್ದುಕೊಂಡೇ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಆತ ಸಂಚು ರೂಪಿಸಿದ್ದ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು.
ಇದೀಗ ಎನ್ ಐಎ ತನಿಖೆಯಲ್ಲಿ ಮಾಝ್ ಮುನೀರ್ ಕೈವಾಡ ದೃಢವಾಗಿದೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ