Kannada NewsLatest

ಶ್ರೇಷ್ಠ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ನವ ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ(ಸೆ.14) ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದ ನವ್ಯೋದ್ಯಮವು ಜಗತ್ತಿನ ಆಕರ್ಷಕ ಕೇಂದ್ರವಾಗಿದೆ. ಹೊಸ ಶಿಕ್ಷಣ ನೀತಿಯು‌ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನೈಸರ್ಗಿಕ ಸಂಪನ್ಮೂಲಗಳ ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2022 ರ ಅನುಷ್ಠಾನ ದ ಜತೆಗೆ ಸಮಗ್ರ ಶಿಕ್ಷಣವನ್ನು ರಾಣಿ ಚೆನ್ನಮ್ಮ ವಿವಿ ನೀಡುತ್ತಿದೆ.
ರಾಜ್ಯದ ಅತೀ ದೊಡ್ಡ ವಿವಿಗಳಲ್ಲಿ ರಾಚವಿ ಕೂಡ ಒಂದು. ಕಡಿಮೆ ಅವಧಿಯಲ್ಲಿ ಉತ್ತಮ‌ ಶೈಕ್ಷಣಿಕ ಸಾಧನೆ ತೋರಿದ ಕುಲಪತಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ರಾಣಿ ಚೆನ್ನಮ್ಮ ಅವರ ತ್ಯಾಗ-ಬಲಿದಾನ ಹಾಗೂ ಶೌರ್ಯ-ಪರಾಕ್ರಮವನ್ನು ಸ್ಮರಿಸಿದ ಅವರು, ಯುವ ಸಮುದಾಯಕ್ಕೆ ರಾಣಿ ಚೆನ್ನಮ್ಮ ಪ್ರೇರಣೆಯಾಗಲಿ ಎಂದರು.

ಗೌರವ ಡಾಕ್ಟರೇಟ್ ಪಡೆದುಕೊಂಡ ಮಹನೀಯರನ್ನು ಅಭಿನಂದಿಸಿದ ಅವರು, ಸಮಾಜದೆಡೆಗಿನ ತಮ್ಮ ಕರ್ತವ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಮಾತೃಭಾಷೆಗೆ ಆದ್ಯತೆ ದೊರಕಬೇಕು. ದೇಶದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವುದರ ಜತೆಗೆ ಹೊಸ ಶಿಕ್ಷಣ ನೀತಿ ಯಶಸ್ವಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಸುದೈವ ಕುಟುಂಬಕಂ, ಸರ್ವೇ ಜನಃ ಸುಖಿನೋ ಭವಂತು ಎಂಬ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಸಾಗಬೇಕು.

ಕ್ರೀಡೆಗಳಲ್ಲಿ ಇತರೆ ದೇಶಗಳು ಹೆಚ್ವಿನ ಪದಕ‌ ಗೆದ್ದಾಗ ನಾವು ಕೂಡ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ‌ ಮಾಡಬೇಕು ಎಂಬ ಆಶಯ‌ ನಮ್ಮೆಲ್ಲರದಾಗಿದೆ. ಈ ದಿಸೆಯಲ್ಲಿ ಯುವ ಸಮುದಾಯಕ್ಕೆ ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದು ರಾಜ್ಯಪಾಲರು ಪ್ರತಿಪಾದಿಸಿದರು.

ಶಾಲೆ-ಪ್ರಯೋಗಾಲಯದ ಅಂತರ ಕಡಿಮೆಗೊಳಿಸಬೇಕು:

ಘಟಿಕೋತ್ಸವ ಭಾಷಣ ಮಾಡಿದ ಆಂಧ್ರಪ್ರದೇಶದ ವಿಜಯನಗರಂ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ ಅವರು, ಶಾಲೆಯಲ್ಲಿನ ವಿಜ್ಞಾನ ಹಾಗೂ ಪ್ರಯೋಗಾಲಯದ ವಿಜ್ಞಾನದ ನಡುವೆ ಅಂತರವು ನಿರಂತರವಾಗಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ತಿಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ದೇಶದ ಅತ್ಯುನ್ನತ ಉನ್ನತ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್.ಐ.ಟಿ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯುತ್ತಿವೆ. ಆದರೆ ಈ ಸಂಸ್ಥೆಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುವುದರಿಂದ ಹೆಚ್ಚು ಜನರಿಗೆ ಕಲಿಕೆಯ ಅವಕಾಶ ಸಿಗುತ್ತಿಲ್ಲ.ಈ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕೂಡ ಇನ್ನೂ ಹೆಚ್ಚಿನ ವಿಶೇಷ ಅನುದಾನ ಒದಗಿಸಬೇಕು ಎಂದು ಡಾ.ಕಟ್ಟಿಮನಿ ಹೇಳಿದರು.

ಶಿಕ್ಷಣ, ತಂತ್ರಜ್ಞಾನ ಹಾಗೂ ಸಂಶೋಧನೆಯನ್ನು ಭಾರತದ ಪ್ರಗತಿಯ ಸಾಧನಗಳನ್ನಾಗಿ ಬಳಸಿಕೊಂಡು ಅಭಿವೃದ್ಧಿ ಸಾಧಿಸಬೇಕಿದೆ ಎಂದರು.

ಕುಡಿಯುವ ನೀರಿನ ತತ್ವಾರವನ್ನು ನೀಗಿಸಬೇಕಾದರೆ ಅಂತರ್ಜಲ ಸಂರಕ್ಷಣೆ ಜತೆಗೆ ನೀರಿನ ಸಮರ್ಪಕ ಬಳಕೆಗೆ ಸೂಕ್ತ ಯೋಜನೆ ರೂಪಿಸಬೇಕಿದೆ. ಈ ದಿಸೆಯಲ್ಲಿ ಇತ್ತೀಚೆಗೆ ಕೇಂದ್ರ ಸರಕಾರ ಇಟ್ಟಿರುವ ಹೆಜ್ಜೆ ಗಮನಾರ್ಹವಾಗಿದೆ ಎಂದು ಪ್ರೊ.ತೇಜಸ್ವಿ ಕಟ್ಟಿಮನಿ ತಿಳಿಸಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರಗೌಡ ಅವರು, ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್‌ ನೀಡುವುದರ ಜತೆಗೆ 48 ಪಿ.ಎಚ್.ಡಿ; 2434 ಸ್ನಾತಕೋತ್ತರ; 40,034 ಪದವಿ; 13 ಪಿಜಿ ಡಿಪ್ಲೋಮಾ ಹಾಗೂ 80 ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ಅಕಾಡೆಮಿಕ್ ಸಾಧನೆ ಹಾಗೂ ಶೈಕ್ಷಣಿಕ ಅಭಿವೃದ್ಧಿ ಕುರಿತು ವಿಸ್ತ್ರತ ಮಾಹಿತಿಯನ್ನು ನೀಡಿದ ಅವರು, ಹಿರೇಬಾಗೇವಾಡಿಯಲ್ಲಿ ವಿವಿಯ ನೂತನ ಕ್ಯಾಂಪಸ್ ನಿರ್ಮಾಣಗೊಳ್ಳುತ್ತಿದೆ ಎಂದರು.

ವಿವಿಯು “ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಸತಿ ನಿಲಯ” ಯೋಜನೆಯಡಿ ಆಯ್ಕೆಗೊಂಡಿದ್ದು, ಈ ಯೋಜನೆಯಡಿ 6 ಬಾಲಕರ ಮತ್ತು 4 ಬಾಲಕಿಯರ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಎನ್.ಇ.ಪಿ. ಅನುಷ್ಠಾನಗೊಳಿಸಲಾಗಿದ್ದು, ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳಿಗೆ ಅಂಕಪಟ್ಟಿ‌ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿ ರಾಮಚಂದ್ರಗೌಡ ತಿಳಿಸಿದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್:

ಸಮಾಜ ಸೇವಾ ಕ್ಷೇತ್ರದ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕರಾದ ವ್ಹಿ. ರವಿಚಂದರ್ ವೆಂಕಟರಾಮನ್ ಅವರಿಗೆ ‘ಡಾಕ್ಟರ್‌ಆಫ್ ಸೈನ್ಸ್’, ಚಲನಚಿತ್ರ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್’ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಅಪಾರ ಸೇವೆ ಪರಿಗಣಿಸಿ ಬೀದರನ ಬಸವತತ್ವ ಪ್ರಚಾರಕಿ, ಕಾಯಕ ದಾಸೋಕ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ‘ಡಾಕ್ಟರ್‌ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು.

48 ಪಿಹೆಚ್.ಡಿ ಪದವಿ ಪ್ರದಾನ:

ವಿಶ್ವವಿದ್ಯಾಲಯದ ವಿವಿಧ ವಿಷಯವಾರು ಅಧ್ಯಯನ ಕೈಗೊಂಡಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಘಟಿಕೋತ್ಸವದಲ್ಲಿ 48 ಪಿಹೆಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

11 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ವರ್ಣ ಪದಕ:

ವಿಶ್ವವಿದ್ಯಾಲಯದಿಂದ ಫಸ್ಟ್ ರ‍್ಯಾಂಕ್ ಪಡದುಕೊಂಡ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರಿಗೆ ಸೇರಿ ಒಟ್ಟು 11 ಸುವರ್ಣ ಪದಕಗಳನ್ನು ಪ್ರದಾನ ಮಾಡಲಾಯಿತು.

ಬ್ಯಾಚುಲರ್ ಆಫ್ ಕಾಮರ್ಸ್ ವಿದ್ಯಾರ್ಥಿನಿ ವಿದ್ಯಾವತಿ ಗುಡೋದಗಿ, ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾರ್ಥಿನಿ ದೀಪಿಕಾ ಚೌವ್ಹಾಣ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ವಿದ್ಯಾರ್ಥಿನಿ ದ್ರಾಕ್ಷಾಯಿಣಿ ವಾಲ್ಮಿಕಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಸೋಶಿಯಾಲಜಿ ವಿದ್ಯಾರ್ಥಿ ತಾತ್ಯಾಸಾಬ್ ಧಾಬಡೆ, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿ ಗೌರಾ ಅಣೆಪ್ಪನವರ, ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾಥೆಮ್ಯಾಟಿಕ್ಸ್ ವಿದ್ಯಾರ್ಥಿನಿ ಅನುಜಾ ಪಾಟೀಲ ಸುವರ್ಣ ಪದಕ ಪಡೆದುಕೊಂಡರು.

4 ಸಬ್ಜೆಕ್ಟ್ ಟಾಪರ್ಸ್ ಗೆ ಸ್ವರ್ಣ ಪದಕ:

ವಿಷಯವಾರು ಅತೀ ಹೆಚ್ಚು ಅಂಕಗಳಿಸಿದ ಸ್ನಾತಕ ಇದ್ಯಾರ್ಥಿನಿಯರಾದ ರಸಿಕಾ ಮಲೈ (ಇಂಗ್ಲಿಷ್), ಸಂಜಿವೀನಿ ಪಾಟೀಲ( ಕನ್ನಡ), ವರ್ಷಾ ಮರ್ಡಿ (ಸೋಶಿಯಾಲಜಿ), ಪ್ರೇರಣಾ ಪನಾಲ್ಕರ್(ಕಾಮರ್ಸ್) ಕ್ರಮವಾಗಿ ಸುವರ್ಣ ಪದಕಗಳನ್ನು ಪಡೆದುಕೊಂಡರು.

163 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಸರ್ಟಿಫಿಕೇಟ್:

ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಆರ್ಟ್ಸ್, ಕಾಮರ್ಸ್, ಎಜ್ಯುಕೇಶನ್ ಮತ್ತು ಸೈನ್ಸ್ ವಿಭಾಗದ ಒಟ್ಟು 163 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರ‍್ಯಾಂಕ್ ಸರ್ಟಿಫಿಕೇಟ್ ನೀಡಲಾಯಿತು.
ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವ ಪ್ರೊ.ಎಂ.ಹನುಮಂತಪ್ಪ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ವಿವಿಯ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.

ನಟ ರಮೇಶ ಅರವಿಂದ್ ಗೆ ರಾಣಿ ಚನ್ನಮ್ಮ ವಿವಿ ಗೌರವ ಡಾಕ್ಟರೇಟ್

https://pragati.taskdun.com/latest/actor-ramesh-aravindhonoured-by-doctoraterani-chennamma-univercity/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button