
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ವಾಮಿ ವಿವೇಕಾನಂದರ ಜನ್ಮ ದಿನ, ಜನೆವರಿ 12 -13ರಂದು ನಡೆಯಬೇಕಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಹುಬ್ಬಳ್ಳಿಗೆ ಶಿಫ್ಟ್ ಆಗಿದೆ.
26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸುವ ಸಂಬಂಧ ಬುಧವಾರ ಸಂಜೆ 6 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಯುವಜನೋತ್ಸವವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸುವ ಕುರಿತು ಮೊದಲು ಚರ್ಚೆ ನಡೆದಿತ್ತಾರೂ, ನಂತರದಲ್ಲಿ ಬೆಳಗಾವಿಯಲ್ಲಿ ನಡೆಸುವ ಬಗ್ಗೆ ಮಾಹಿತಿ ಬಂದಿತ್ತು. ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿತ್ತು. ವಿವಿಧ ಸಮಿತಿ ರಚನೆ ಪ್ರಕ್ರಿಯೆಯೂ ನಡೆದಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿ ಯುವಜನೋತ್ಸವ ಉದ್ಘಾಟಿಸಲಿದ್ದಾರೆ ಎಂದೂ ತಿಳಿಸಲಾಗಿತ್ತು. ಯುವಜನೋತ್ಸವಕ್ಕಾಗಿ ಒಟ್ಟೂ 25 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರಕಾರ 15 ಕೋಟಿ ರೂ. ಹಾಗೂ ಕೇಂದ್ರ ಸರಕಾರ 10 ಕೋಟಿ ರೂ. ನೀಡಲಿವೆ. ರಾಷ್ಟ್ರದ ವಿವಿಧ ಭಾಗಗಳಿಂದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಒಂದು ಸಾವಿರದಷ್ಟು ಅಧಿಕಾರಿ, ಸಿಬ್ಬಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೆ ಸಿದ್ಧತೆ ನಡೆಸುವಂತೆ ಸೂಚನೆಯೂ ಜಿಲ್ಲಾಡಳಿತಕ್ಕೆ ಬಂದಿತ್ತು.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನೋತ್ಸವವನ್ನು ನಡೆಸಿ, ನಗರದ ಸಿಪಿಎಡ್ ಮೈದಾನ, ಸರದಾರ್ ಹೈಸ್ಕೂಲ್ ಮೈದಾನ ಮೊದಲಾದೆಡೆ ಪುಸ್ತಕಮಳಿಗೆಗಳನ್ನು ಸ್ಥಾಪಿಸುವ ಕುರಿತು ಯೋಚಿಸಲಾಗಿತ್ತು. ವಿಶ್ವಕನ್ನಡ ಸಮ್ಮೇಳನದ ನಂತರ ಇದೊಂದು ಬೆಳಗಾವಿಯ ಐತಿಹಾಸಿಕ ಸಮ್ಮೇಳನವಾಗುವ ನಿರೀಕ್ಷೆಇತ್ತು.
ಆದರೆ ಇದೀಗ ಮತ್ತೆ ಯುವಜನೋತ್ಸವವನ್ನು ಹಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಯುವಜನೋತ್ಸವ ಹುಬ್ಬಳ್ಳಿಗೆ ಶಿಫ್ಟ್ ಆಗಿರುವುದನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಗತಿವಾಹಿನಿಗೆ ಖಚಿತಪಡಿಸಿದ್ದಾರೆ.
ಸಂಬಂಧಿಸಿದ ಈ ಹಿಂದಿನ ಸುದ್ದಿ:
ಜ.12ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ; 25 ಕೋಟಿ ರೂ. ಬಿಡುಗಡೆ: ಪ್ರಧಾನಿ ಮೋದಿ ಉದ್ಘಾಟನೆ
https://pragati.taskdun.com/big-convention-in-belgaum-on-jan-12-13-25-crore-rs-release-inauguration-by-pm-modi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ