*ಮಹಾನಗರ ಪಾಲಿಕೆ ವಿರುದ್ಧ ಕರವೇ ಬೃಹತ್ ಪ್ರತಿಭಟನೆ*

ಮಹಾನಗರ ಪಾಲಿಕೆ ವಿರುದ್ಧ ಕರವೇ ಬೃಹತ್ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
“ಬೆಳಗಾವಿ ಕನ್ನಡಿಗರ ಆಸ್ತಿ, ಕರ್ನಾಟಕದ ಅವಿಭಾಜ್ಯ ಅಂಗ!” ಎಂಬ ಘೋಷಣೆಯನ್ನು ಸಾರುತ್ತಾ, ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಪರ ನಿರ್ಣಯ ಕೈಗೊಳ್ಳಲು ಹಾಗೂ “ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು” ಎಂಬ ಠರಾವು ಹೊರಡಿಸಲು ಹಿಂದೇಟು ಹಾಕುತ್ತಿರುವ ಧೋರಣೆಯನ್ನು ಖಂಡಿಸಿ, ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಆರ್. ಅಭಿಲಾಷ್ ಅವರ ನೇತೃತ್ವದಲ್ಲಿ, ನೂರಾರು ಕರವೇ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಜಮಾಯಿಸಿ, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಬೆಳಗಾವಿ ಕನ್ನಡಿಗರ ಸ್ವತ್ತು” ಎಂಬ ಘೋಷಣೆಗಳೊಂದಿಗೆ ಹೋರಾಟಗಾರರು ಮಹಾನಗರ ಪಾಲಿಕೆಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.
“ಕನ್ನಡದ ನೆಲ, ಕನ್ನಡಿಗರ ಹಕ್ಕು ಮತ್ತು ಬೆಳಗಾವಿಯ ಕನ್ನಡ ಅಸ್ಮಿತೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ” ಎಂದು ತಿಳಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಆರ್. ಅಭಿಲಾಷ್ ಅವರು, ಬೆಳಗಾವಿ ಮಹಾನಗರ ಪಾಲಿಕೆಗೆ ಒಂದು ವಾರದ ಗಡುವು ನೀಡಿದರು.
ಒಂದು ವಾರದೊಳಗೆ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು” ಎಂಬ ಠರಾವನ್ನು ಮಹಾನಗರ ಪಾಲಿಕೆ ಅಂಗೀಕರಿಸದಿದ್ದರೆ, ಬರುವ ಬುಧವಾರ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಪರವಾಗಿ ನಿರ್ಣಯ ಕೈಗೊಳ್ಳಲು ವಿಫಲವಾದರೆ, ಬೆಳಗಾವಿ ಮಹಾನಗರ ಪಾಲಿಕೆಯನ್ನು ಸುಪರ್ಸೀಡ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಆರ್. ಅಭಿಲಾಷ್ ಅವರು ತಿಳಿಸಿದರು.
ಈ ವೇಳೆ ಜಿಲ್ಲಾ ಗೌರವಾಧ್ಯಕ್ಷರಾದ ಅರುಣ್ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷರಾದ ಗಿರಿಜಾ, ನಗರಾಧ್ಯಕ್ಷರಾದ ರಾಜು ಕಲ್ಪತ್ರಿ, ಆಟೋ ಘಟಕದ ಅಧ್ಯಕ್ಷರಾದ ಸತ್ಯಪ್ಪ, ಝೋಯೆಲ್, ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರಾದ ಸೂರಜ್ ಸೇರಿದಂತೆ ಅನೇಕ ಕರವೇ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




