
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭೂತರಾಮನಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರ ಕುರಿತು ಈಗ ವಿಭಿನ್ನ ಹೇಳಿಕೆಗಳು ಬರುತ್ತಿದ್ದು, ಹಿರೇಬಾಗೇವಾಡಿಗೆ ಸಂಪೂರ್ಣ ಸ್ಥಳಾಂತರವಾಗಲಿದೆಯೋ ಅಥವಾ ಹೆಚ್ಚುವರಿ ಕಟ್ಟಡವಷ್ಟೆ ಅಲ್ಲಿ ನಿರ್ಮಾಣವಾಗಲಿದೆಯೋ ಎನ್ನುವ ಗೊಂದಲ ಮೂಡಿದೆ.
ಈ ಕುರಿತು ಹೇಳಿಕೆ ನೀಡಿರುವ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, 2009ರಲ್ಲಿ ಆರಂಭವಾಗಿರುವ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯವು ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಿಂದ ಹಿರೇಬಾಗೇವಾಡಿಗೆ ಸ್ಥಳಾಂತರಿಸಲಾಗುತ್ತಿದ್ದು, ಸಚಿವ ಸಂಪುಟದ ಒಪ್ಪಿಗೆಯಷ್ಟೆ ಬಾಕಿ ಇದೆ ಎಂದಿದ್ದಾರೆ.
ಹಿರೇಬಾಗೇವಾಡಿ ಗ್ರಾಮ ಪಂಚಾಯತಿ ಹದ್ದಿಯಲ್ಲಿರುವ ೭೦ ಎಕರೆ ಸರ್ಕಾರಿ ಜಮೀನು ನೀಡಲು ಕಂದಾಯ ಸಚಿವ ಆರ್ ಆಶೋಕ ಅನುಮೋದನೆ ನೀಡಿದ್ದು ಕ್ಯಾಬಿನೇಟ್ ಅನುದಮೋದನೆ ಅಷ್ಟೇ ಬಾಕಿ ಉಳಿದಿದೆ. ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯವು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿಯೇ ಬಹಳ ಬೇಗನೆ ಸ್ಥಳಾಂತರಗೊಂಡು ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಆದರೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ವಿಶ್ವವಿದ್ಯಾಲಯ ಸ್ಥಳಾಂತರವಾಗುವುದಿಲ್ಲ. ಈಗ ಅರಣ್ಯ ಇಲಾಖೆ ಜಾಗದಲ್ಲಿರುವುದರಿಂದ ವಿಸ್ತರಣೆಗೆ ಅವಕಾಶವಿಲ್ಲ. ಹಾಗಾಗಿ ಹೆಚ್ಚುವರಿ ಕಟ್ಟಡಗಳನ್ನು ಹಿರೇಬಾಗೇವಾಡಿಯಲ್ಲಿ ಕಟ್ಟಲಾಗುತ್ತದೆ. ಭೂತರಾಮನಟ್ಟಿಯಲ್ಲಿರುವ ವಿಶ್ವವಿದ್ಯಾಲಯ ಅಲ್ಲಿಯೇ ಇರಲಿದೆ ಎಂದಿದ್ದಾರೆೆ.
ಹಿರೇಬಾಗೇವಾಡಿಯಲ್ಲಿ ಕೇವಲ 70 ಎಕರೆ ಜಾಗ ಸಿಕ್ಕಿರುವುದರಿಂದ ಅಲ್ಲಿ ಪೂರ್ಣ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಡಳಿತ ಕಟ್ಟಡ ಭೂತರಾಮನಟ್ಟಿಯಲ್ಲಿಯೇ ಇರಲಿದ್ದು, ತರಗತಿಗಳು ಹಿರೇಬಾಗೇವಾಡಿಯಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಸರಕಾರದಿಂದ ಅಧಿಕೃತವಾಗಿ ಇನ್ನಷ್ಟೆ ಮಾಹಿತಿ ಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ