ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆ ಬಂಡಾಯದ ಬಿಸಿ ಉಂಟಾಗಿದೆ. ಟಿಕೇಟ್ ಘೋಷಣೆ ಆಗುತ್ತಿದ್ದಂತೆ ವೆಂಕಟೇಶ ಹೆಗಡೆ ಹೊಸಬಾಳೆ ಶಿರಸಿಯಲ್ಲಿ ಬಂಡಾಯ ಭಾವುಟ ಹಾರಿಸಿದ್ದಾರೆ. ಕಾಂಗ್ರೆಸ್ – ಬಿಜೆಪಿ ಮಧ್ಯ ಒಳ ಒಪ್ಪಂದವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತಾವು ಸ್ವತಂತ್ರವಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ನಿನ್ನೆಯಷ್ಟೇ ಭೀಮಣ್ಣ ನಾಯ್ಕ್ ಅವರನ್ನು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಭೀಮಣ್ಣ ನಾಯ್ಕ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೊಸಬಾಳೆ ಹೇಳಿದ್ದಾರೆ. ಹಲವು ಬಾರಿ ಕಾಂಗ್ರೇಸ್ ನಿಂದ ಸ್ಪರ್ದಿಸಿದ್ದ ಭೀಮಣ್ಣ ನಾಯ್ಕ್ ಸೋಲನ್ನು ಕಂಡಿದ್ದರು. ಈ ಬಾರಿ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳಿದ್ದು ಅವರಲ್ಲಿ ಯಾರಿಗಾದರು ಟಿಕೆಟ್ ನೀಡಬಹುದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತೆ ಭೀಮಣ್ಣ ಅವರಿಗೇ ಟಿಕೇಟ್ ನೀಡಿರುವುದು ನನಗೆ ಅಸಮಾಧಾನ ತಂದಿದೆ ಎಂದು ವೆಂಕಟೇಶ್ ಹೆಗಡೆ ಹೇಳಿದರು.
ಹಲವಾರು ವರ್ಷದಿಂದ ನಾನು ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದು ಜನರ ವಿಶ್ವಾಸ ಗಳಿಸಿದ್ದೇನೆ. ಅದಕ್ಕಾಗಿ ಜನರ ಬೆಂಬಲ ನನಗೆ ಇದೆ. 25000 ಮತಗಳ ಅಂತರದಿಂದ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ವೆಂಕಟೇಶ ಹೆಗಡೆ ಹೊಸಬಾಳೆ ಹೇಳಿದ್ದಾರೆ.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ನಾಮಧಾರಿ ಮತಗಳು ಜಾಸ್ತಿ ಇರುವುದರಿಂದ ಒಂದು ವೇಳೆ ಕಾಂಗ್ರೆಸ್ ನಿಂದ ವೆಂಕಟೇಶ್ ಹೆಗಡೆ ಹೊಸಬಾಳೆಗೆ ಟಿಕೆಟ್ ಸಿಕ್ಕಿದ್ದರೆ ಅವರೂ ಬ್ರಾಹ್ಮಣ ಸಮುದಾಯ ಆಗಿರುವುದರಿಂದ ಬ್ರಾಹ್ಮಣ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬುದು ವೆಂಕಟೇಶ್ ಹೆಗಡೆ ಲೆಕ್ಕಾಚಾರ. ಆದ್ರೆ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಳ್ಳೆಯ ಹಿಡಿತವನ್ನು ಇಟ್ಟುಕೊಂಡಿದ್ದಾರೆ . ಆರು ಬಾರಿ ಸತತವಾಗಿ ಗೆಲುವನ್ನು ಕಂಡಿದ್ದಾರೆ.
ಒಂದು ವೇಳೆ ಭೀಮಣ್ಣ ನಾಯ್ಕ್ ಮತ್ತು ವೆಂಕಟೇಶ್ ಹೆಗಡೆ ಹೊಸಬಾಳೆ ಇಬ್ಬರೂ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ನ ವೋಟುಗಳು ಒಡೆದು ಹೊಗುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಬ್ರಾಹ್ಮಣರ ಮತಗಳು ವಿಭಜನೆಯಾಗಿ ಭೀಮಣ್ಣ ನಾಯ್ಕ್ ಗೆ ಲಾಭವಾಗಲೂಬಹುದು. ಭೀಮಣ್ಣ ನಾಯ್ಕ್ ಮತ್ತು ವೆಂಕಟೇಶ್ ಹೆಗಡೆ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ರೆ ಸ್ಪೀಕರ್ ಕಾಗೇರಿಗೆ ಪ್ರಭಲ ಸ್ಪರ್ಧೆಯಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ