ಪ್ರಗತಿವಾಹಿನಿ ಸುದ್ದಿ: ಕಳೆದ ಹಲವು ದಿನಗಳಿಂದ ಮಳೆಗೆ ಹೈರಾಣಾಗಿದ್ದ ಉಡುಪಿ ಜನರಿಗೆ ಇಂದು ಮಳೆ ವಿರಾಮ ನೀಡಿದೆ. ಆದರೂ ಕೂಡಾ ಇಂದು ಮತ್ತು ನಾಳೆಯೂ ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ನೀಡಲಾಗಿದೆ. ಉಡುಪಿಯಲ್ಲಿ ನಿನ್ನೆವರೆಗೆ ಸರಾಸರಿ 93.04 ಮಿಮೀ ಮಳೆಯಾಗಿದೆ. ಭಾರಿ ಮಳೆಯಾಗಿದ್ದರಿಂದ ನೂರಾರು ಮನೆ, ಅಂಗಡಿಗೆ ನೀರು ನುಗ್ಗಿದೆ.
ಜಿಲ್ಲೆಯಾದ್ಯಂತ ಬಿಟ್ಟುಬಿಡದೆ ಸುರಿದ ಭಾರಿ ಮಳೆಗೆ ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತವಾಗಿದೆ. ಉಡುಪಿ ನಗರದ ಬೈಲಕೆರೆ, ಕರಂಬಳ್ಳಿ ಪಾಡಿಗಾರು, ಗುಂಡಿ ಬೈಲು ಪ್ರದೇಶದ 30ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿ ಸಿಲುಕಿದ್ದವರನ್ನು ಸ್ಥಳಾಂತರಿಸಿದ್ದಾರೆ
ಕೆರೆ, ಕಾಲುವೆ, ತೋಡು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ರಸ್ತೆ ಜಲಾವೃತವಾಗಿದೆ. ಕೆಲವು ಹಳ್ಳಿಗಳಲ್ಲಿ ದೋಣಿ ಬಳಸಿ ಮಕ್ಕಳನ್ನು ಸೋಮವಾರ ಶಾಲೆಗೆ ಕಳುಹಿಸಲಾಗಿದೆ.
ಬೈಂದೂರಿನಲ್ಲಿ 147.3 ಮಿ.ಮೀ, ಕುಂದಾಪುರದಲ್ಲಿ 138.6 ಮಿ. ಮೀ, ಉಡುಪಿಯಲ್ಲಿ 118 ಮಿ. ಮೀ, ಬ್ರಹ್ಮಾವರದಲ್ಲಿ 104 ಮಿ. ಮೀ, ಹೆಬ್ರಿಯಲ್ಲಿ 95.8 ಮಿ. ಮೀ, ಕಾಪುವಿನಲ್ಲಿ 79.5 ಮಿ. ಮೀ ಹಾಗೂ ಕಾರ್ಕಳದಲ್ಲಿ 63.9 ಮಿ. ಮೀ ಸಹಿತ ತಾಲೂಕುಗಳಲ್ಲಿ ಸರಾಸರಿ 110 ಮಿ.ಮೀ ಮಳೆಯಾಗಿರುತ್ತದೆ.
ಭಾನುವಾರ ಮಧ್ಯಾಹ್ನದಿಂದ ಉಡುಪಿ ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಉಡುಪಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ನುಗ್ಗಿದ್ದು ಅಸ್ತವ್ಯಸ್ಥಗೊಂಡಿದ್ದು, ಕೆಲವು ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ತಗ್ಗು ಪ್ರದೇಶಗಳಲ್ಲಿರುವ ರಸ್ತೆಗಳು ಸಂಪೂರ್ಣ ನೀರು ನಿಂತಿದ್ದರಿAದ ಜಲಾವೃತ್ತಗೊಂಡಿತ್ತು. ರಸ್ತೆಯಲ್ಲಿ ಮೂರು ನಾಲ್ಕು ಅಡಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬೆಳಗ್ಗೆ 9-10 ಗಂಟೆ ಹೊತ್ತಿಗಾಗಲೇ ಗುಂಡಿಬೈಲು, ಪಾಡಿಗಾರು, ಮೂಡುಬೆಟ್ಟು, ಕೊಡವೂರು, ಬೈಲಕೆರೆ, ಮಠದಬೆಟ್ಟು, ಕರಂಬಳ್ಳಿ, ಉಡುಪಿ ಶ್ರೀ ಕೃಷ್ಣಮಠದ ಪಾರ್ಕಿಂಗ್, ಬಡಗಬೆಟ್ಟು, ತೆಂಕಬೆಟ್ಟು ಸಂಪರ್ಕ ಮಾರ್ಗದಲ್ಲಿ ನೀರು ನಿಂತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಪಾಯ ಸಾಧ್ಯತೆ ಇರುವ ಪ್ರದೇಶಗಳ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಪೊಲೀಸ್ ಸಿಬ್ಬಂದಿಯು ಜನರನ್ನು ರಕ್ಷಿಸುತ್ತಿದ್ದರು. ಮಾರ್ಗದರ್ಶನ ನೀಡುತ್ತಿದ್ದರು. ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು.
ಉಡುಪಿ ನಗರಸಭೆ ಪ್ರದೇಶದ ಗುಂಡಿಬೈಲು, ಬೈಲುಕೆರೆ, ಪಂದೆಬೆಟ್ಟು ಪ್ರದೇಶದಲ್ಲಿ ನೆರೆಯಲ್ಲಿ ಸಿಲುಕಿದ್ದ 30 ಮಂದಿ ಸಂತ್ರಸ್ತರನ್ನು ಗುಂಡಿಬೈಲು-ಶಿವಳ್ಳಿಯ ಮಥುರ ಅನ್ನಛತ್ರ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದರೆ, 10 ಮಂದಿ ತಮ್ಮ ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆದರು.
ಪೌರಾಯುಕ್ತ ರಾಯಪ್ಪ, ತಹಶೀಲ್ದಾರ್ ಗುರುರಾಜ್, ಸ್ಥಳ ಭೇಟಿ ನೀಡಿ ರಕ್ಷಣಾ ಕಾರ್ಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಕೆಲವು ಭತ್ತದ ಗದ್ದೆಗಳಿಗೆ ನೀರು ತುಂಬಿ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿತ್ತು. ತಡರಾತ್ರಿ ಹೆಚ್ಚು ಗಾಳಿ-ಮಳೆಯಿಂದಾಗಿ ಹಲವೆಡೆ ಹಾನಿ ಉಂಟಾಗಿದೆ.
ಜಿಲ್ಲೆಯಾದ್ಯಂತ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ