Kannada NewsKarnataka NewsLatest

ತಾಂತ್ರಿಕ ಸಮಸ್ಯೆ ಪರಿಹರಿಸದ ಅಧಿಕಾರಿಗಳು: ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದ ನಿರಾಶ್ರಿತರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹಾನಿಯಾದ ಮನೆಗಳ ಫಲಾನುಭವಿಗಳು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಅವಳಿ ತಾಲೂಕುಗಳ ನಿರಾಶ್ರಿತರು ನಿರಂತರ ಮಳೆ ಮತ್ತು ಘಟಪ್ರಭಾ ನದಿಯ ಭಾರಿ ಪ್ರವಾಹದಿಂದ ಸುಮಾರು ೭೮೬೧ ಮನೆಗಳು ಹಾನಿಯಾಗಿವೆ. ೬೨೨೫ ಮನೆಗಳು ಎ ವರ್ಗದಲ್ಲಿ ೨೧೮೯, ಬಿ ವರ್ಗದಲ್ಲಿ ೧೫೭೩ ಮತ್ತು ಸಿ ವರ್ಗದಲ್ಲಿ ೨೪೬೩ ಮನೆಗಳು ಮಂಜೂರಾಗಿದ್ದು, ಇವುಗಳಲ್ಲಿ ಮಂಜೂರಾದ ಮನೆಗಳಲ್ಲಿ ೨೧೫ ಫಲಾನುಭವಿಗಳ ವರ್ಗ(ಕೆಟಗೇರಿ) ಬದಲಾವಣೆ, ೮೮ ಫಲಾನುಭವಿಗಳ ಬ್ಯಾಂಕ್ ಖಾತೆ, ಇತರೇ ತಿದ್ದುಪಡಿ ಮತ್ತು ೪೭೭ ಫಲಾನುಭವಿಗಳ ಸ್ಥಳ ಬದಲಾವಣೆಗಾಗಿ ಒಟ್ಟು ೭೮೦ ಪ್ರಕರಣಗಳು ನಿಗಮದಲ್ಲಿ ಬಾಕಿ ಇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ ನಿಗಮದ ಸೈಟ್‌ನಲ್ಲಿ ಎಂಟ್ರಿ ಮಾಡಿರುವ ೬೫೧ ಫಲಾನುಭವಿಗಳ ಹೆಸರುಗಳು ಹೈಡ್, ಡೆಲಿಟ್ ಆಗಿದ್ದು, ೯೮೫ ಫಲಾನುಭವಿಗಳ ಫೈಲಗಳು ತಹಶೀಲ್ದಾರ ಕಾರ್ಯಾಲಯ ಮತ್ತು ಪಂಚಾಯತ ಮಟ್ಟದಲ್ಲಿ ಡಾಟಾ ಎಂಟ್ರಿ ಮಾಡಲು ಬಾಕಿ ಇವೆ. ವರ್ಗ ಬದಲಾವಣೆ, ತಿದ್ದುಪಡಿ, ಸ್ಥಳ ಬದಲಾವಣೆ, ಹೈಡ್, ಡೆಲಿಟ್ ಮತ್ತು ಡಾಟಾ ಎಂಟ್ರಿ ಬಾಕಿ ಇರುವ ಫಲಾನುಭವಿಗಳು ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಆದ್ದರಿಂದ ವಾಸಿಸಲು ಯಾವುದೇ ವಸತಿ ಸೌಲಭ್ಯವಿಲ್ಲದ್ದರಿಂದ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಗೋಕಾಕ ತಾಲೂಕಿನ ಗೋಕಾಕ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಕೊಣ್ಣೂರ, ಶಿಂಗಳಾಪೂರ, ಕುಂದರಗಿ, ಅಂಕಲಗಿ, ಮಲ್ಲಾಪೂರ ಪಿಜಿ, ಧುಪದಾಳ, ಪಾಮಲದಿನ್ನಿ, ಉರಬಿನಹಟ್ಟಿ, ಶೀಗಿಹೊಳಿ, ಬೂದಿಹಾಳ, ಯದ್ದಲಗುಡ್ಡ, ಮಾಲದಿನ್ನಿ, ಉಪ್ಪಾರಹಟ್ಟಿ, ಖನಗಾಂವ, ಮಿಡಕನಟ್ಟಿ, ಹೂಲಿಕಟ್ಟಿ, ಕೊಳವಿ, ತವಗ, ಕೈತನಾಳ, ಕನಸಗೇರಿ, ಡುಂ ಉರಬಿನಹಟ್ಟಿ, ಅರಭಾವಿ ದಾವಲತ್ತಿ, ಚಿಕ್ಕನಂದಿ, ತೆಳಗಿನಹಟ್ಟಿ, ಮಕ್ಕಳಗೇರಿ.

ಮೂಡಲಗಿ ತಾಲೂಕಿನ ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಹುಣಶ್ಯಾಳ ಪಿಜಿ, ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮಗಳು ೨೦೧೯ ರ ಅಗಸ್ಟ್ ತಿಂಗಳಲ್ಲಿ ಪ್ರವಾಹ ಹಾಗೂ ಮಳೆಯಿಂದ ಮನೆಗಳು ಹಾನಿಗೀಡಾಗಿವೆ.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಅಲ್ಲಪ್ಪ ಕಂಕಣವಾಡಿ, ರಮೇಶ ಬೀರನಗಡ್ಡಿ, ಕಾಮಪ್ಪ ಕಿತ್ತೂರ, ನ್ಯಾಯವಾದಿಗಳಾದ ಮುತ್ತೆಪ್ಪ ಕುಳ್ಳೂರ, ಬಿ.ಬಿ. ಬೀರನಗಡ್ಡಿ, ಕಾಮಸಿ ಕರೆನ್ನವರ, ಸಿದ್ದಪ್ಪ ಪೂಜೇರಿ, ಬಸವಂತ ಕಾಪಸಿ, ಅಡಿವೆಪ್ಪ ಹಂಜಿ, ಅಡಿವೆಪ್ಪ ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕಳೆದ ವರ್ಷದಲ್ಲಿ ಭಾರೀ ಪ್ರವಾಹ ಮತ್ತು ನಿರಂತರ ಮಳೆಯಿಂದಾಗಿ ಸಾಕಷ್ಟು ಮನೆಗಳು ಹಾನಿಯಾಗಿವೆ. ಘಟಪ್ರಭಾ ನದಿಗೆ ಬಂದ ಪ್ರವಾಹದಿಂದ ಅಂದಾಜು ೮ ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಸರ್ಕಾರದಿಂದ ಈಗಾಗಲೇ ಕೆಲವರಿಗೆ ಮನೆಗಳ ಪರಿಹಾರ ದೊರಕಿದೆ. ಕೆಲ ಫಲಾನುಭವಿಗಳ ತಾಂತ್ರಿಕ ಸಮಸ್ಯೆಗಳು ಉಂಟಾಗಿದ್ದು, ಅದನ್ನು ನಿವಾರಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಸತಿ ಸಚಿವ ಸೋಮಣ್ಣ, ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಿರಾಶ್ರಿತರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದ್ದೇನೆ.
– ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button