Kannada NewsKarnataka News

ಹಿಂಡಲಗಾ ಜೈಲಿನಿಂದ ಐವರು ಕೈದಿಗಳ ಬಿಡುಗಡೆ

ಗಣರಾಜ್ಯೊತ್ಸವದ ನಿಮಿತ್ಯ ಕೇಂದ್ರ ಕಾರಾಗೃಹದಲ್ಲಿ ಬಂದಿಗಳ ಬಿಡುಗಡೆ ಕಾರ್ಯಕ್ರಮ ಆಯೋಜನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಕಾರಾಗೃಹದಲ್ಲಿ ೭೪ ನೇ ಗಣರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮ ಹಾಗೂ ಖೈದಿಗಳ ಬಿಡುಗಡೆ ಕಾರ್ಯಕ್ರಮ ಜರುಗಿತು. ಬೆಳಗ್ಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಇವರು ಧ್ವಜಾರೋಹಣ ನೇರವೆರಿಸಿದರು. ನಂತರ ಕಾರಾಗೃಹ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯವರಿಂದ ಆಕರ್ಷಕ ಪರೇಡ್ ಆಯೋಜಿಸಲಾಗಿತ್ತು.

ಕಾರಾಗೃಹ ಒಳಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವ ಮಹಿಳಾ ಸಜಾ ಬಂಧಿಯಿಂದ ಧ್ವಜಾ ರೋಹಣ ನೇರವೆರಿಸಲಾಯಿತು. ನಂತರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕೈದಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಸರ್ವರಿಗೂ ಸಿಹಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವ ಐದು ( ನಾಲ್ಕು ಪುರುಷ + ಒಂದು ಮಹಿಳೆ) ಜನ ಬಂಧಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಶ್ರೀ ಕೃಷ್ಣಕುಮಾರ ಮಾತನಾಡಿ, ಭಾರತದ ಸಂವಿಧಾನ ಜನೇವರಿ ೨೬ ೧೯೫೦ ರಂದು ಜಾರಿಗೆ ಬಂದಿದೆ. ಈ ಸಂವಿಧಾನವು ಭಾರತದ ಸರ್ವಾಂಗೀಣ ಪ್ರಗತಿಗೆ ತುಂಬಾ ಮಹತ್ವದ ಪಾತ್ರ ನಿರ್ವಹಿಸಿದೆ. ಇದೊಂದು ಪವಿತ್ರ ಗ್ರಂಥವಾಗಿದ್ದು ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯ ಕರ್ತವ್ಯ. ಕಾರಾಗೃಹ ಇಲಾಖೆಯು ಖೈದಿಗಳ ಸುಧಾರಣೆಗಾಗಿ ಹಾಗೂ ಬಿಡುಗಡೆ ನಂತರ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ಅನೂಕಲವಾಗುವಂತೆ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಈ ಕಾರಾಗೃಹದಲ್ಲಿ ಅಬ್ದುಲತೀಫ್, ಸುನೀಲಕುಮಾರ, ವಿಲಾಸ ವಾಡಕರ, ಸೋನಪ್ಪ ವಿಠ್ಠಲ ಕೊಕರೆ, ಹಾಗೂ ಬಸವ್ವಾ ಶಿವರುದ್ರಪ್ಪ ಕೊಂಡಗುರಿ- ಈ ಖೈದಿಗಳು ಬಿಡುಗಡೆ ಹೊಂದಿದರು.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರವು ನಿಗದಿ ಪಡಿಸಿರುವ ಮಾರ್ಗಸೂಚಿಗಳು ಮತ್ತು ವೇಳಾ ಪಟ್ಟಿ ಅನ್ವಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಶಿಕ್ಷಾ ಬಂಧಿಗಳಿಗೆ ವಿಶೇಷ ಮಾಫಿಯೊಂದಿಗೆ ಎರಡನೇಯ ಹಂತದಲ್ಲಿ ಈ ಕಾರಾಗೃಹದಿಂದ ನಾಲ್ಕು ಜನ ಪುರುಷ ಹಾಗೂ ಒಬ್ಬರು ಮಹಿಳಾ ಬಂಧಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದರಲ್ಲಿ ೬೦ ವರ್ಷ ವಯಸ್ಸು ಹಾಗೂ ಶಿಕ್ಷೆಯ ೫೦% ಶೇಕಡಾ ಭಾಗ ಪೂರ್ಣಗೊಳಿಸಿದ ಒಬ್ಬ ಪುರುಷ ಬಂಧಿಯನ್ನು ಹಾಗೂ ಶಿಕ್ಷೆಯ ಅವಧಿಯ ೨/೩ (೬೬%) ಭಾಗ ಪೂರ್ಣಗೊಳಿಸಿದ ನಾಲ್ಕು (೩+೧) ಜನ ಬಂಧಿಗಳು ಒಟ್ಟು ಐದು ಜನ ಖೈದಿಗಳು ಕಾರಾಗೃಹದಿಂದ ಬಿಡುಗಡೆ ಹೊಂದುತ್ತಿದ್ದಾರೆ. ಬಿಡುಗಡೆ ನಂತರ ಸಮಾಜದಲ್ಲಿ ಸಜ್ಜನರ ಸಂಗ ಮಾಡಿ ಇತರರಿಗೆ ಕಾನೂನಿನ ಬಗ್ಗೆ ಅರಿವು ನೀಡಿ, ಕುಟುಂಬದವರೊಂದಿಗೆ ಪ್ರೀತಿಯಿಂದ ಬಾಳಿ ಉತ್ತಮ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ|| ಮಹೇಶ ನಾಗರ ಬೆಟ್ಟ, ಆಡಳಿತಾಧಿಕಾರಿಯಾದ ಬಿ.ಎಸ್. ಪೂಜಾರಿ ಸಹಾಯಕ ಅಧಿಕ್ಷಕರಾದ  ಶಹಾಬುದ್ದಿನ ಕೆ., ಪಿ.ಎಸ್.ಐ  ಅರುಣ ಡಿ.ವಿ., ಜೈಲರಗಳಾದ  ವೈ.ಎಸ್. ನಾಯ್ಕ,  ಅಭಿಷೇಕ, . ಭಜಂತ್ರಿ ಉಪಸ್ಥಿತರಿದ್ದರು. ಉಪಾಧ್ಯಾಯರಾದ  ಶಶಿಕಾಂತ ಯಾದಗೂಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

*ಪ್ರವಾಸಿ ಮಂದಿರದಲ್ಲಿಯೇ ಆತ್ಮಹತ್ಯೆಗೆ ಶರಣಾದ PWD ಅಧಿಕಾರಿ*

https://pragati.taskdun.com/pwd-officersuicidenelamangalashivagange/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button