
ಪ್ರಗತಿವಾಹಿನಿ ಸುದ್ದಿ: ವೈಕುಂಠ ಏಕಾದಶಿ ಹಿನ್ನೆಲೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನಾನು ಕೂಡಾ ದೇವರಿಗೆ ಪೂಜೆ ಮಾಡುತ್ತೇನೆ, ದೇವರಿಗೆ ನಮಸ್ಕಾರ ಮಾಡದೇ ನಾನು ಮನೆಯಿಂದ ಹೊರಗಡೆ ಹೋಗುವುದಿಲ್ಲ ಎಂದು ಅವರು ಈ ವೇಳೆ ತಿಳಿಸಿದ್ದಾರೆ.
ತಿಮ್ಮಪ್ಪನ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ದೇಶದೆಲ್ಲೆಡೆ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದೆ. ಧರ್ಮೋ ರಕ್ಷತಿ ರಕ್ಷಿತಃ. ಯಾರು ಧರ್ಮವನ್ನು ಕಾಪಾಡುತ್ತಾರೋ ಧರ್ಮ ಅವರನ್ನು ಕಾಪಾಡುತ್ತದೆ. ದೇವರ ಸನ್ನಿಧಿಯಲ್ಲಿ ಲಕ್ಷ್ಮಿವೆಂಕಟೇಶ್ವರನ ದರ್ಶನ ಮಾಡಿದರೆ ವೈಕುಂಠ ಸೇರುವ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ನಮಗೆಲ್ಲ ಇದೆ ಎಂದು ಹೇಳಿದರು.
ಲಕ್ಷಾಂತರ ಜನರು ಇಂದು ದೇವಸ್ಥಾನಕ್ಕೆ ಹೋಗಿ ವಿಷ್ಣು ಸ್ವರೂಪದಲ್ಲಿರುವ ವೆಂಕಟೇಶ್ವರನ ದರ್ಶನ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜನರಿಗೂ ಭಗವಂತ ಒಳ್ಳೆಯದು ಮಾಡಲಿ. ಮನೆಯಲ್ಲಿ ದುಡ್ಡು ಲಕ್ಷ್ಮೀ ಎರಡು ಇರುತ್ತೋ ಅದೇ ರೀತಿ ಐಶ್ವರ್ಯ ಹೆಚ್ಚಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದರು.
ತಮಿಳುನಾಡಿನಲ್ಲಿ ಸುದರ್ಶನ ಹೋಮ ಮಾಡಿಸಿದ ವಿಚಾರವನ್ನು ಮಾಧ್ಯಮದವರು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಹೌದ್ರೀ ನಾನು ದಿನ ಪೂಜೆ ಮಾಡುತ್ತೇನೆ. ದಿನ ದೇವರನ್ನು ನೋಡುತ್ತಿರುತ್ತೇನೆ. ದಿನ ಹೋಮಗಳನ್ನು ಮನೆಯಲ್ಲಿ ಮಾಡುತ್ತೇನೆ. ವಿಶೇಷ ಅಂದರೆ ಪ್ರತಿ ದಿನ ನನ್ನ ರಕ್ಷಣೆಗೆ ನೀವು ಬೇಕು ಅಲ್ವ? ನನ್ನ ಮನಸ್ಸಿಗೆ, ನೆಮ್ಮದಿಗೆ, ನನ್ನ ಸಮಾಧಾನಕ್ಕೆ ಮಾಡಿಸಿದ್ದೇನೆ. ಧರ್ಮದ ಬಗ್ಗೆ ಆಚರಣೆ ಬಗ್ಗೆ ನನಗೆ ನಂಬಿಕೆ ಇದೆ. ದೇವರಿಗೆ ನಮಸ್ಕಾರ ಮಾಡದೇ ನಾನು ಮನೆಯಿಂದ ಹೊರಗಡೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ