Belagavi NewsBelgaum NewsKannada NewsKarnataka NewsLatest

*ಉತ್ತಮ ಶಿಕ್ಷಣ ಸಿಕ್ಕಾಗ ಅಭಿವೃದ್ಧಿ ಸಾಧ್ಯ: ಡಾ. ನಿತಿನ್ ಗಂಗಾನೆ*

ಪ್ರಗತಿವಾಹಿನಿ ಸುದ್ದಿ: ಉತ್ತಮ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭಿಸಬೇಕು. ಅಂದಾಗ ಮಾತ್ರ ಅಭಿವೃದ್ಧಿ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ನೀರಿಕ್ಷೆಗಳಿವೆ. ಅವುಗಳನ್ನು ನಾವು ಭರಿಸಬೇಕಾಗಿದೆ. ನಾವೆಲ್ಲ ಅದಕ್ಕೆ ಪೂರಕವಾಗಿ ಕರ‍್ಯಯೋಜನೆ ರೂಪಿಸಬೇಕಾಗಿದೆ ಎಂದು ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ ಹೇಳಿದರು.


ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. ೨೬ ಜನೇವರಿ ೨೦೨೪ ರಂದು ೭೫ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರದ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನವು ಜ್ಯಾತ್ಯತೀತತೆ, ಸಮಾನತೆಯನ್ನು ಪ್ರತಿಪಾದಿಸಿದೆ. ಅದರಂತೆ ಯಾರೂ ದೊಡ್ಡವರಲ್ಲ. ಎಲ್ಲರೂ ಸಮಾನರು. ಜೀವನಪರ್ಯಂತ ನಾವೆಲ್ಲರೂ ಒಂದಾಗಿರಬೇಕು. ಸಂಶೋಧನೆಯಲ್ಲಿ ಮುಂದುವರೆದು ಅಭಿವೃದ್ದಿಗೊಂಡಾಗ ಮಾತ್ರ ದೇಶವು ಸಮಗ್ರ ಅಭಿವೃದ್ದಿ ಹೊಂದಿದಂತಾಗುತ್ತದೆ. ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಅಭಿವೃದ್ದಿ ಹೊಂದಿದರೆ ಅಭಿವೃದ್ದಿಯಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣದಿಂದ ವಂಚಿತಗೊಳ್ಳಬಾರದು. ಅದಕ್ಕಾಗಿ ಸಮಾಜಕ್ಕೆ ಶಿಕ್ಷಣ ನೀಡುವ ಹಾಗೂ ಸಂಶೋಧನಾ ವ್ಯವಸ್ಥೆ ಅಭಿವೃದ್ದಿಗೊಳ್ಳಬೇಕೆಂದು ಅವರು ತಿಳಿಸಿದರು.


ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ದಯಾನಂದ ಅವರು ಮಾತನಾಡಿ, ನಾವು ಇಂದು ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನವನ್ನು ಹೊಂದಿದ್ದೇವೆ. ಸಂವಿಧಾನವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದಲ್ಲಿ ಪ್ರತಿಪಾದಿಸುವ ತತ್ವಗಳು ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ಹೆಚ್ಚು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸಲು ಕೆಲಸ ಮಾಡುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಸಮುದಾಯಗಳ ನಡುವೆ ಶಾಂತಿ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸಲು ಶ್ರಮಿಸಬೇಕು. ಒಗ್ಗಟ್ಟಿನಿಂದ ಕೂಡಿದ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.


ತಾರತಮ್ಯ ಮತ್ತು ಅಸಮಾನತೆಗಳಿಂದ ಮುಕ್ತವಾದ ಸಮಾಜವನ್ನು ನಿರ್ಮಿಸುವಲ್ಲಿ ಕೆಲಸ ಮಾಡೋಣ. ಪ್ರಾಣವನ್ನೇ ಪಣಕ್ಕಿಟ್ಟು ಗಡಿಯಲ್ಲಿ ದೇಶವನ್ನು ರಕ್ಷಿಸಲು ಗಡಿಯಲ್ಲಿ ಕರ‍್ಯನಿರ್ವಹಿಸುವ ಸೈನಿಕರನ್ನು ಸ್ಮರಿಸೋಣ. ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ತಲೆ ಸಲ್ಲಿಸುತ್ತ. ಸರಳತೆ, ಕಾಳಜಿಯಿಂದ ರೋಗಿಗಳಿಗೆ ಸೇವೆಸಲ್ಲಿಸಲು ನಾವೆಲ್ಲರೂ ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ ಎಂದು ಸಲಹೆ ನೀಡಿದರು.
ಆಸ್ಪತ್ರೆಯು ಪ್ರಕಟಿಸುವ ಲೈಫ್ ಲೈನ್, ಫೊಕಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆ ಮೇಲೆ ಕಾಹೆರ ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಡಾ. ವಿ ಡಿ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button