ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್ ಸಿ, ಎಸ್ ಟಿ, ಲಿಂಗಾಯತ ಪಂಚಮಸಾಲಿ, ಕುರುಬ, ಒಕ್ಕಲಿಗ ಸೇರಿದಂತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಲವು ಸಮುದಾಯಗಳ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಪ್ರಸ್ತಾವನೆಗೆ ಉತ್ತರಿಸಿದ ಅವರು, ಯಾವುದೇ ಸಮುದಾಯಗಳಿಗೆ ಅನ್ಯಾಯ ಆಗದ ರೀತಿಯಲ್ಲಿ ಕಾನೂನಾತ್ಮಕವಾಗಿ ಈ ಕುರಿತು ತೀರ್ಮಾನ ಮಾಡುವುದಾಗಿ ತಿಳಿಸಿದರು.
ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ಎಸ್ ಸಿ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ವಿಸಲು ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿ ಮಾಡಬೇಕಾದರೆ ಸಂವಿಧಾನದ ೯ ನೇ ಶೆಡ್ಯೂಲ್ ಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ. ಅದೇ ರೀತಿ ಕುರುಬ ಸಮುದಾಯ ಎಸ್ ಟಿ ಮೀಸಲಾತಿಗೆ ಹೋರಾಡುತ್ತಿದೆ. ಪಂಚಮಸಾಲಿ ಸಮುದಾಯ ೨ಎ ಪ್ರವರ್ಗಕ್ಕೆ ಹಕ್ಕು ಮಂಡಿಸುತ್ತಿದೆ. ಆದರೆ ಒಟ್ಟರೆಯಾಗಿ ಈ ಮೀಸಲಾತಿ ಪ್ರಮಾಣವನ್ನು ಶೇ. ೫೦ ಕ್ಕೆ ಮಿತಿಗೊಳಿಸಬೇಕು ಎಂಬುದನ್ನು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ ಸಂವಿಧಾನ ಪೀಠ ಸ್ಪಷ್ಟವಾಗಿ ಹೇಳಿದೆ.
ಆದರೆ ಈ ಮೀಸಲಾತಿ ಪ್ರಮಾಣವನ್ನು ವಿಶೆಷ ಸಂದರ್ಭಗಳಲ್ಲಿ ಪರಾಮರ್ಶೆ ಮಾಡಲು ಅವಕಾಶವೂ ಇದೆ. ಇದರ ಆಧಾರದ ಮೇಲೆ ಹಲವು ರಾಜ್ಯಗಳು ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿವೆ. ಆದರೆ ಆ ಹೆಚ್ಚಳಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ನಾವು ಈ ಎಲ್ಲ ಅಂಶಗಳನ್ನು ಪರಶೀಲಿಸಬೇಕಿದೆ. ಎಲ್ಲ ಸಮುದಾಯಗಳಿಗೆ ಯಾವ ರೀತಿ ನ್ಯಾಯ ಕೊಡಬೇಕು ಮತ್ತು ಕಾನೂನಿನ ಸಮಸ್ಯೆ ಎದುರಾಗದಂತೆ ಯಾವ ರೀತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂಬುದರ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಸಮಿತಿ ಮೀಸಲಾತಿ ಬೇಡಿಕೆ ಇಟ್ಟಿರುವ ಸಮುದಾಯಗಳ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಸಮುದಾಯದವರು ತಮ್ಮನ್ನು ಪ್ರ ವರ್ಗ 3 ಬಿ ಇಂದ ಪ್ರವರ್ಗ 2ಎ ಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯದವರು ಕೃಷಿಯನ್ನೇ ಅವಲಂಬಿಸಿದವರು. ಇತ್ತೀಚೆಗೆ ಕುಟುಂಬಗಳು ಒಡೆದಂತೆ ಕೃಷಿ ಭೂಮಿ ಕೂಡ ಭಾಗವಾಗಿದೆ. ಹೀಗಾಗಿ ಆರ್ಥಿಕವಾಗಿ ಈ ಸಮಾಜ ಹಿಂದುಳಿದಿದೆ ಎಂಬುದು ಅವರ ವಾದ. ತಮ್ಮ ಸಮುದಾಯ ಹಿಂದುಳಿದಿರುವುದಕ್ಕೆ ಕಾರಣವಾಗಿರುವ ಅಂಶಗಳನ್ನು ಈ ಸಮುದಾಯದವರು ಹಿಂದುಳಿದ ವರ್ಗಗಳ ಆಯೋಗದ ಮನವರಿಕೆ ಮಾಡಿಕೊಡಬೇಕು. ಅದಾದ ಬಳಿಕ ಆಯೋಗ ಮಾಡುವ ಶಿಫಾರಸು ಆದರಿಸಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಈಗಾಗಲೇ ವಿವಿಧ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗೆ ಧಕ್ಕೆಯಾಗಬಾರದು. ಅದರ ಜೊತೆಗೆ ಇತರೆ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಕಾನೂನು ಪ್ರಕಾರ ಮೀಸಲಾತಿಯನ್ನು ಕಲ್ಪಿಸಬೇಕಾಗಿದೆ. ಇದು ನಿಜಕ್ಕೂ ನಮಗೆ ಸವಾಲು ಎಂದು ಅವರು ಹೇಳಿದರು.
2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಿದ್ದರು. ಅದಾದ ಬಳಿಕ ಬಲಿಜ ಸಮುದಾಯ ಮತ್ತು ಆ ಸಮುದಾಯಕ್ಕೆ ಸಮಾನಾಂತರ ಹೆಸರಿನ ಜಾತಿಗಳನ್ನು ಪ್ರವರ್ಗ- 2ಎ ಸೇರಿಸಲಾಯಿತು. ಆದರೆ ಯಾವುದೇ ಲಿಂಗಾಯತ ಜಾತಿಗಳನ್ನು 2ಎ ಗೆ ಸೇರಿಸಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೀಸಲಾತಿಯನ್ನು ಸಾಂವಿಧಾನಿಕವಾಗಿ ನೀಡಬೇಕಾಗುತ್ತದೆ. ಇಂದಿರಾ ಸಹಾನಿ ತೀರ್ಪಿನ ಆಧಾರದಲ್ಲಿ ಮೇಲೆ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ. ಮೀಸಲಾತಿ ನೀಡುವ ಸಂಬಂದ ತಡ ಮಾಡುವ ಪ್ರಶ್ನೆಯೇ ಇಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡುವ ಶಿಫಾರಸುಗಳನ್ನು ತಕ್ಷಣ ಜಾತಿ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ