Belagavi NewsBelgaum NewsKannada NewsKarnataka NewsLatest

*ಅಭಿವೃದ್ಧಿ ಕಾರ್ಯಕ್ಕೆ ಮನಸೋತ ನಿವಾಸಿಗಳು; ಜನರ ಪ್ರೀತಿ ಕಂಡು ಮತ್ತಷ್ಟು ಘೋಷಿಸಿದ ಸಚಿವರು!*

`ಕೇವಲ ಗಣೇಶಪುರವಲ್ಲ, ಇಡೀ ಕ್ಷೇತ್ರದ ಜನರಿಗಾಗಿ ನಾನು ಹೇಗೆ ಕೆಲಸ ಮಾಡುತ್ತಿದ್ದೇನೋ ಅದೇ ರೀತಿಯಲ್ಲಿ ಕ್ಷೇತ್ರದ ಜನರೂ ನನ್ನ ಜೊತೆ ನಿರಂತರ ನಿಲ್ಲುವುದಾಗಿ ಭರವಸೆ ನೀಡುತ್ತಿದ್ದಾರೆ. ಇಂತಹ ಜನರನ್ನು, ಇಂತಹ ಕ್ಷೇತ್ರವನ್ನು ಪಡೆದಿರುವ ನಾನೇ ಧನ್ಯ’ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಣೇಶಪುರ ಜ್ಯೋತಿ ನಗರದ ಹಿಂದೂ ಡೊಂಬಾರಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಬುಧವಾರ ಬೃಹತ್ ಸಂಖ್ಯೆಯಲ್ಲಿ ಸಚಿವರ ಗೃಹ ಕಚೇರಿಗೆ ಆಗಮಿಸಿ ಧನ್ಯವಾದ ಸಮರ್ಪಿಸಿದರು.

ಬೆಳಗ್ಗೆಯಿಂದಲೇ ಕಚೇರಿಯತ್ತ ಆಗಮಿಸುತ್ತಿರುವ ಜನರನ್ನು ಕಂಡು ಸಚಿವರು ಆಶ್ಚರ್ಯಚಕಿತರಾದರು. ತಮ್ಮ ಪ್ರದೇಶದಲ್ಲಿ ಆಗಿರುವ ಮತ್ತು ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಜನರು, ಶಾಸಕರೊಬ್ಬರ ಇಂತಹ ಸ್ಪಂದನೆಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದರು. ತಮ್ಮ ಬೇಡಿಕೆಗೆಲ್ಲ ಸಚಿವರು ಸ್ಪಂದಿಸುತ್ತ ಬಂದಿದ್ದಾರೆ. ಏನೇ ಕೇಳಿದರೂ ಇಲ್ಲ ಎನ್ನುತ್ತಿಲ್ಲ, ನಾವು ಸದಾ ಅವರ ಬೆನ್ನಿಗೆ ನಿಲ್ಲುತ್ತೇವೆ. ಇಂತಹ ಶಾಸಕರನ್ನು ಪಡೆದ ನಾವೇ ಧನ್ಯರು ಎಂದು ಜನರು ಹೇಳಿದರು. 

ಜನರ ಪ್ರೀತಿ, ಗೌರವಕ್ಕೆ ಮಂತ್ರಮುಗ್ಧರಾದ ಸಚಿವರು, ಜ್ಯೋತಿ ನಗರದ ಸಮಗ್ರ ಅಭಿವೃದ್ದಿಗೆ ನಿರ್ಧರಿಸಿದ್ದೇನೆ. ಆ ಪ್ರದೇಶದಲ್ಲಿರುವ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು. ಅಲ್ಲಿ ಜನರ ಬೇಡಿಕೆಯಂತೆ ಡಿಜಿಟಲ್ ಲೈಬ್ರರಿ, ಸಮುದಾಯ ಭವನ, ಅಂಗನವಾಡಿ ಕೇಂದ್ರ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವುದು. ಅಷ್ಟೇ ಅಲ್ಲ, ಆ ಜನರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಜನರು ಒಪ್ಪುವುದಾದರೆ ಅಲ್ಲ ಕೆಲವು ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿ ಎಲ್ಲ ನಿವಾಸಿಗಳಿಗೂ ವಸತಿ ಸೌಲಭ್ಯ ದೊರಕಿಸಿಕೊಡುವ ಬೃಹತ್ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. 

Home add -Advt

ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವುದಾದರೆ 3 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ನಿವಾಸಿಗಳು ಸ್ಥಳ ಬಿಟ್ಟುಕೊಟ್ಟು ಸಹಕರಿಸಬೇಕು. ಸಂಪೂರ್ಣ ಸ್ಲಮ್ ಪ್ರದೇಶ ನಿರ್ನಾಮವಾಗಿ ಆ ಪ್ರದೇಶ ಅತ್ಯಂತ ಅಭಿವೃದ್ಧಿ ಹೊಂದುವಂತೆ ಮಾಡಲಾಗುವುದು. ನೀವೆಲ್ಲ ಯೋಚಿಸಿ, ನಿರ್ಧಾರಕ್ಕೆ ಬನ್ನಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. 

ನಿಮ್ಮ ಸಮಾಜದವರು ನೀಡಿದ ಆಶೀರ್ವಾದ ಮತ್ತು ಬೆಂಬಲ ನನಗೆ ಜನಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ತುಂಬಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸರ್ಕಾರದ ಸೌಲಭ್ಯಗಳು ತಲುಪುತ್ತಿರುವುದಕ್ಕೆ ಜನರ ಈ ಸ್ಪಂದನೆಯೇ ಸಾಕ್ಷಿಯಾಗಿದೆ. ನನ್ನೊಂದಿಗೆ ನಿರಂತರವಾಗಿರುವುದಾಗಿ ಭರವಸೆ ನೀಡುವ ಮೂಲಕ ಶಕ್ತಿ ತುಂಬಿರುವ ನನ್ನ ಜನರ ಶ್ರೇಯೋಭಿವೃದ್ಧಿ ನನ್ನ ಕರ್ತವ್ಯ. ಅದನ್ನು ಪಾಲಿಸುತ್ತಿದ್ದೇನೆ. ಕೇವಲ ಗಣೇಶಪುರವಲ್ಲ, ಇಡೀ ಕ್ಷೇತ್ರದ ಜನರಿಗಾಗಿ ನಾನು ಹೇಗೆ ಕೆಲಸ ಮಾಡುತ್ತಿದ್ದೇನೋ ಅದೇ ರೀತಿಯಲ್ಲಿ ಕ್ಷೇತ್ರದ ಜನರೂ ನನ್ನ ಜೊತೆ ನಿರಂತರ ನಿಲ್ಲುವುದಾಗಿ ಭರವಸೆ ನೀಡುತ್ತಿದ್ದಾರೆ. ಇಂತಹ ಜನರನ್ನು, ಇಂತಹ ಕ್ಷೇತ್ರವನ್ನು ಪಡೆದಿರುವ ನಾನೇ ಧನ್ಯ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. 

ಈ ವೇಳೆ ಮುಖಂಡರಾದ ಮಹೇಶ ಕೋಲಕಾರ್, ಮಲ್ಲೇಶ್ ಚೌಗುಲೆ, ಬಾಳು ದೇಸೂರಕರ್, ಸಾಗರ ಲಾಖೆ, ಭೋಸಲೆ, ಶಂಕರ್ ಲಾಖೆ, ಬಾಳು ಲಾಖೆ, ಪಪ್ಪು ಭೋಸಲೆ, ಸಂದೀಪ್ ಡವಳೆ, ಸುಂದರ್ ಲಾಖೆ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button