Kannada NewsKarnataka NewsLatest

*ಹಾಸನಾಂಬ ದರ್ಶನಕ್ಕೆ ರೇವಣ್ಣ ಗೈರು*: *ಆಹ್ವಾನ ನೀಡದಿದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಹೋಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಿರ್ಧರಿಸಿದ್ದಾರೆ. ಹಾಸನಾಂಬ ಮಹೋತ್ಸವಕ್ಕೆ ತಮಗೆ ಅಧಿಕೃತ ಆಹ್ವಾನ ನೀಡಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ರೇವಣ್ಣ, ಆಹ್ವಾನ ನೀಡುವ ರೀತಿಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿರುವ ಮಾಜಿ ಸಚಿವನಿಗೆ ಗೌರವಯುತವಾಗಿ ಆಹ್ವಾನ ನೀಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, ಗ್ರಾಮ ಸಹಾಯಕನ ಕೈಯಲ್ಲಿ ಆಹ್ವಾನ ಕಳುಹಿಸಿದ್ದಾರೆ. ಅದನ್ನು ಸ್ವೀಕರಿಸದೆ ವಾಪಸ್ ಕಳುಹಿಸಿದ್ದೇನೆ. ನನ್ನನ್ನು ಕರೆಯದ ಮೇಲೆ ನಾನು ಯಾಕೆ ಹೋಗಬೇಕು? ಇಲ್ಲಿಂದಲೇ ತಾಯಿಗೆ ಕೈ ಮುಗಿಯುತ್ತೇನೆ ಎಂದು ಹೇಳಿದ್ದಾರೆ.

ಮಹೋತ್ಸವದ ಫ್ಲೆಕ್ಸ್‌ಗಳಲ್ಲಿ ಜೆಡಿಎಸ್‌ನ ನಾಲ್ವರು ಮತ್ತು ಬಿಜೆಪಿಯ ಇಬ್ಬರು ಶಾಸಕರ ಫೋಟೋಗಳನ್ನೂ ಹಾಕಿಲ್ಲ ಎಂದು ರೇವಣ್ಣ ಆಕ್ಷೇಪಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ. ಸಂಸದರು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಪಾಸ್ ಮತ್ತು ಆಹ್ವಾನ ಪತ್ರಿಕೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಬುಧವಾರದವರೆಗೆ ಸಮಸ್ಯೆ ಬಗೆಹರಿಸಲು ಗಡುವು ನೀಡಿದ್ದಾರೆ. ಎಲ್ಲರಿಗೂ ಸಮಾನವಾಗಿ ಪಾಸ್ ನೀಡದಿದ್ದರೆ ತಮ್ಮ ಕಾರ್ಯಕರ್ತರನ್ನು ಮಹೋತ್ಸವಕ್ಕೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭದ್ರತೆಗೆ 2,000 ಪೊಲೀಸರನ್ನು ನಿಯೋಜಿಸಿದರೂ ತಾವೇ ಮುಂದೆ ನಿಲ್ಲುತ್ತೇನೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಎಲ್ಲರಿಗೂ ಪಾಸ್ ನೀಡಬೇಕು, ಇಲ್ಲವಾದರೆ ಎಲ್ಲರೂ ಸಾಮಾನ್ಯ ಸರದಿಯಲ್ಲಿ ದರ್ಶನ ಪಡೆಯುವ ವ್ಯವಸ್ಥೆ ಇರಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ದರ್ಶನಕ್ಕೆ ಬರುವಂತೆ ಕರೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಸ್ವಾಗತ ಕಮಾನಿಗೆ 25 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಸ್ಥಳೀಯ ಶಾಸಕರ ಫೋಟೋ ಹಾಕಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಮನೆಯಿಂದ ಹಣ ತಂದು ಖರ್ಚು ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಬುಧವಾರದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

Related Articles

Back to top button