Kannada NewsKarnataka NewsLatestNational

*ಐಪಿಎಸ್ ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಮಹತ್ವದ ಬದಲಾವಣೆ*: *ಏನಿದು ಹೊಸ ವ್ಯವಸ್ಥೆ?*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆ ಮಾಡಿದೆ.

ನೂತನವಾಗಿ ಆಯ್ಕೆಯಾದ ಐಪಿಎಸ್ ತರಬೇತಿ ಅಧಿಕಾರಿಗಳನ್ನು ತಮ್ಮ ನಿಯೋಜಿತ ರಾಜ್ಯ ಕೇಡರ್‌ಗಳಿಗೆ ಕಳುಹಿಸುವ ಮೊದಲು, ಕೇಂದ್ರ ಗೃಹ ಸಚಿವಾಲಯಕ್ಕೆ (MHA) ನಿಯೋಜಿಸುವ ಹೊಸ ಪದ್ಧತಿ ಜಾರಿಗೆ ತರಲಾಗುತ್ತಿದೆ.

ಇದು ಭಾರತೀಯ ಪೊಲೀಸ್ ತರಬೇತಿಯಲ್ಲಿ ಮೊದಲ ಬಾರಿಗೆ ಜಾಅರಿಗೆ ತರುತ್ತಿರುವ ವ್ಯವಸ್ಥೆಯಾಗಿದ್ದು, ಇದು ಅಧಿಕಾರಿಗಳಿಗೆ ಕೇಂದ್ರ ಮಟ್ಟದ ಆಡಳಿತಾತ್ಮಕ ಅನುಭವ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ನಿಯಮದ ಪ್ರಕಾರ, ತರಬೇತಿ ಪಡೆಯುತ್ತಿರುವ ಐಪಿಎಸ್ ಅಧಿಕಾರಿಗಳನ್ನು ಅವರ ನಿಯೋಜಿತ ರಾಜ್ಯಗಳಿಗೆ ಪ್ರೊಬೇಶನ್ ಹಾಗೂ ಹೆಚ್ಚಿನ ತರಬೇತಿಗಾಗಿ ಕಳುಹಿಸುವ ಮುನ್ನ, ಅವರು ಕೇಂದ್ರ ಗೃಹ ಸಚಿವಾಲಯದೊಂದಿಗೆ ನೇರ ಸಂಪರ್ಕ ಮತ್ತು ಸಂವಹನ (Attachment) ಹೊಂದಿರಲಿದ್ದಾರೆ. ಈ ವಿಶೇಷ ಉದ್ದೇಶಕ್ಕಾಗಿ 2025ರ ಬ್ಯಾಚ್‌ ಅಧಿಕಾರಿಗಳಿಗಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಈ ನೂತನ ಪ್ರಕ್ರಿಯೆಯು ಅಧಿಕಾರಿಗಳಿಗೆ ಕೇಂದ್ರ ಮಟ್ಟದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಗೃಹ ಸಚಿವಾಲಯದ ಕಾರ್ಯವೈಖರಿಯ ಕುರಿತು ನಿಕಟ ಅನುಭವವನ್ನು ನೀಡಲಿದೆ.

ಈ ಪ್ರಮುಖ ಬದಲಾವಣೆಗೆ ಸಾಕ್ಷಿಯಾಗುತ್ತಿರುವ 78ನೇ ನಿಯಮಿತ ನೇಮಕಾತಿ (Regular Recruit) ಬ್ಯಾಚ್‌ನಲ್ಲಿ ಒಟ್ಟು 151 ತರಬೇತಿ ಅಧಿಕಾರಿಗಳಿದ್ದಾರೆ. ಇದರಲ್ಲಿ ಭಾರತದ 135 ಅಧಿಕಾರಿಗಳು ಹಾಗೂ ನೆರೆಯ ದೇಶಗಳಾದ ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್‌ನ 16 ವಿದೇಶಿ ತರಬೇತಿ ಅಧಿಕಾರಿಗಳು ಸೇರಿದ್ದಾರೆ. ಈ ಎಲ್ಲಾ ಅಧಿಕಾರಿಗಳು ಇತ್ತೀಚೆಗಷ್ಟೇ ಹೈದರಾಬಾದ್‌ನ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (SVPNPA) ಯಲ್ಲಿ ತಮ್ಮ ಮೊದಲ ಹಂತದ ಮೂಲಭೂತ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮುಂದಿನ ಹಂತದ ತರಬೇತಿಗೆ ಸಜ್ಜಾಗುತ್ತಿದ್ದಾರೆ.

ಈ ಹಿಂದೆ 2023ರಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ, ತರಬೇತಿ ಅಧಿಕಾರಿಗಳು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ತಕ್ಷಣವೇ ಅವರನ್ನು ಅವರಿಗೆ ನಿಯೋಜಿಸಲಾದ ರಾಜ್ಯಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಈಗ ಬದಲಾದ ನಿಯಾಮದ ಪ್ರಕಾರ ಗೃಹ ಸಚಿವಾಲಯದ ಮಟ್ಟದಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸಬೇಕು.


Related Articles

Back to top button