ಪ್ರಗತಿವಾಹಿನಿ ಸುದ್ದಿ, ಪುಣೆ: ಬೆಟ್ಟ ಗುಡ್ಡಗಳಿಂದ ಧುಮುಕುವ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ಯಾರು ತಾನೆ ಕಾತುರರಾಗಿಲ್ಲ?
ಆದರೆ ಇಲ್ಲೊಂದು ಜಲಪಾತ ಇದಕ್ಕೆ ವ್ಯತಿರಿಕ್ತವಾಗಿದೆ. ಕೆಲ ಬಾರಿ ಇಲ್ಲಿನ ಜಲಪಾತ ಅಕ್ಷರಶಃ ಉಲ್ಟಾ ಆಗುತ್ತದೆ. ಬೃಹತ್ ಬೆಟ್ಟದ ಬಂಡೆಗಳ ತುದಿಯಿಂದ ನೀರು ಮೇಲ್ಮುಖವಾಗಿ ಧುಮುಕುತ್ತದೆ.
ಇಂಥದ್ದೊಂದು ಸೃಷ್ಟಿ ವೈಚಿತ್ರ್ಯವಿರುವುದು ಮುಂಬೈನಿಂದ 120 ಕಿ.ಮೀ. ಪುಣೆಯಿಂದ 15 ಕಿ.ಮೀಗಳಷ್ಟು ದೂರದ ನಾನೇಘಾಟ್ ಎಂಬ ಸ್ಥಳದಲ್ಲಿ. ಇದು ವಿಚಿತ್ರವಾಗಿದ್ದರೂ ಬಹುತೇಕ ಜನತೆಯ ಪಾಲಿಗೆ ಅಪರಿಚಿತ. ಅಂತೆಯೇ ಈ ಜಲಪಾತದ ಹೆಸರು ನಾನೇಘಾಟ್ ಫಾಲ್ಸ್. ಇದು ಇರುವುದು ಪುಣೆಯ ಜುನ್ನಾರ್ ಬಳಿಯ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವೈಶಾಖರೆ ಗ್ರಾಮಕ್ಕೆ ಸಮೀಪದಲ್ಲಿರುವ ಮಲ್ಶೆಜ್ ಘಾಟ್ ರಸ್ತೆಯಲ್ಲಿದೆ.
ಎಲ್ಲ ಸಂದರ್ಭಗಳಲ್ಲೂ ಈ ಸೃಷ್ಟಿವೈಚಿತ್ರ್ಯ ಕಾಣಸಿಗುವುದಿಲ್ಲ. ಮಳೆಗಾಲ ಪೂರ್ತಿ ಪ್ರಬಲಗೊಂಡ ಸಂದರ್ಭದಲ್ಲಿ ಮಾತ್ರ ಈ ದೃಶ್ಯ ನೋಡಲು ಸಾಧ್ಯ. ಕಲ್ಲು ಬಂಡೆಗಳ ಮೇಲಿಂದ ನೀರು ಧುಮುಕುವ ಸಂದರ್ಭದಲ್ಲಿ ಬೀಸುವ ಬಲವಾದ ಗಾಳಿಗೆ ಕೆಳಮುಖವಾಗಿ ಧುಮುಕುವ ನೀರು ಮೇಲ್ಮುಖವಾಗಿ ತಳ್ಳಲ್ಪಡುತ್ತದೆ. ಅಂತೆಯೇ ತಲೆಕೆಳಗಾದ ಜಲಪಾತದಂತೆ ಇದು ಗೋಚರಿಸುತ್ತದೆ.
ಸಾಹಸಪ್ರಿಯ ಚಾರಣಿಗರಿಗೆ ಹೇಳಿ ಮಾಡಿಸಿದಂತಿರುವ ಈ ಜಾಗಕ್ಕೆ ಹೋಗಲು ಕೆಲ ಟ್ರೆಕ್ಕಿಂಗ್ ಗುಂಪುಗಳು ಕಾರ್ಯ ನಿರ್ವಹಿಸುತ್ತಿದ್ದು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಇತಿಹಾಸ ತಿಳಿಸುವ ಗುಹೆಗಳು ಕೂಡ ಇಲ್ಲಿವೆ. ಅಂತೆಯೇ ಈ ಮಾನ್ಸೂನ್ ಅವಧಿ ಇಲ್ಲಿನ ವಿಚಿತ್ರ ಸೃಷ್ಟಿಯ ಆಸ್ವಾದನೆಗೆ ಸಕಾಲವೆನಿಸಿದೆ.
ಮೂರಕ್ಕಿಂತ ಹೆಚ್ಚು ಹಲ್ಲು ಕಳೆದುಕೊಂಡ ಬಿಪಿಎಲ್ ಕಾರ್ಡುದಾರರಿಗೆ ಉಚಿತ ದಂತಪಂಕ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ