ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನಲ್ಲಿ ಕಬ್ಬು ಹಂಗಾಮು ಪ್ರಾರಂಭ ವಾಗಿದರಿಂದ ರೈತರು ಕಷ್ಟ ಪಟ್ಟು ಬೆಳೆಸಿರುವ ಕಬ್ಬು ಸಾಗಾಟಕ್ಕೆ ಹದಗೆಟ್ಟ ರಸ್ತೆಗಳಿಂದ ಕಬ್ಬು ಸಾಗಾಟಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ವತಃ ರೈತರೇ ಅಥಣಿ ಸಾವಳಗಿ ಹೆದ್ದಾರಿ ಯಲ್ಲಮವಾಡಿ ಗ್ರಾಮದ ಹತ್ತಿರ ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ಸ್ವಕ್ಷೇತ್ರದಲ್ಲಿ ಈ ವಾರದಲ್ಲಿ ರೈತರಿಂದ ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿರುವುದು ಎರಡನೇ ಘಟನೆ ಇದಾಗಿದೆ.
ವಿಷಯದ ಕುರಿತು ರೈತ ರವಿ ಕರ್ಜಗಿ ಹಾಗೂ ಬಾಹುಬಲಿ ಬಸಗೌಡ ಮಾತನಾಡಿ, ಅಥಣಿ ಪುರ್ವ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದೆ ಬರುತ್ತಿಲ್ಲ, ಹಲವಾರು ಬಾರಿ ಅಥಣಿ ಶಾಸಕರಿಗೆ ಮನವಿ ಸಲ್ಲಿಸಿದರು ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಇದರಿಂದ ರೈತರು ಹಾಗೂ ಟ್ರಾಕ್ಟರ್ ಮಾಲಿಕರು ಜೋತೆಯಾಗಿ ರಸ್ತೆ ರಿಪೇರಿ ಮಾಡುತಿದ್ದೇವೆ. ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಿಂದ ಯಲ್ಲಮವಾಡಿ ಗ್ರಾಮದವರೆಗೆ ಸರಿ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೊಗಿದೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುದಕ್ಕೂ ಈ ರಸ್ತೆಯಲ್ಲಿ ಪರದಾಡುವಂತಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆ ರಸ್ತೆ ಪಕ್ಕದಲ್ಲಿ ಬಿದ್ದು ಹಾನಿ ಸಂಭವಿಸುವುದರಿಂದ ನಾವು ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ವಿಷಯಕ್ಕೆ ಸಂಬಂಧಿಸಿದಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಕೇಳಿದಾಗ ಒಂದು ವಾರದಲ್ಲಿ ರಸ್ತೆ ರಿಪೇರಿ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕರ ವಾಹನ ಘೇರಾವ್, ಮಾರ್ಗ ಬದಲಾಯಿಸಿದ ಶಾಸಕ
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಕನ್ನಡಪರ ಸಂಘಟನೆಗಳು ಹಾಗೂ ಕೆಲವು ಗ್ರಾಮಸ್ಥರು ಘೇರಾವ್ ಹಾಕಿ ಸಮಸ್ಯೆಗಳನ್ನು ಅವಲೋಕಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ತಾಲೂಕಿನ ಹಿಪ್ಪರಗಿ ಜಿರೋ ಪಾಯಿಂಟ್ ಹತ್ತಿರ ಹಿಪ್ಪರಗಿ ಬ್ಯಾರೇಜ್ ಸಂಪರ್ಕ್ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಬೇಕಾದ ಶಾಸಕರು ಹಿಪ್ಪರಗಿ ಮಾರ್ಗವಾಗಿ ಬರುವ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಕನ್ನಡಪರ ಸಂಘಟನೆಗಳು ಸತ್ತಿ ಗ್ರಾಮದ ಹತ್ತಿರ ಮುತ್ತಿಗೆ ಹಾಕಿ ನಮ್ಮ ಗ್ರಾಮದ ಸಮಸ್ಯೆ ಆಲಿಸುವಂತೆ ಹಾಗೂ ಗ್ರಾಮಕ್ಕೆ ಭೇಟಿ ನಿಡುವಂತೆ ಪಟ್ಟು ಹಿಡಿದರು.
ರಸ್ತೆ ಕಾಮಗಾರಿ ಭೂಮಿ ಪೂಜೆ ಸಲ್ಲಿಸಬೇಕಾದ ಅಥಣಿ ಶಾಸಕರು ಮಾರ್ಗ ಬದಲಾಯಿಸಿ ಸಮಸ್ಯೆ ಇರುವ ನಂದೇಶ್ವರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಹಾಗೂ ಕಳೆದ ವರ್ಷದ ಕೃಷ್ಣಾ ನದಿ ನೆರೆ ಸಂತ್ರಸ್ತರ ಪರಿಹಾರ ಕುರಿತು ಸಮಸ್ಯೆ ಆಲಿಸಿದರು. ಇದೆ ವೇಳೆ ಕನ್ನಡಪರ ಸಂಘಟನೆಗಳು ಮುಖಂಡ ಹನಮಂತ ನಂದಗಾಂವ್ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಗ್ರಾಮದ ರಸ್ತೆ ನಿರ್ಮಾಣ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಅನಿವಾರ್ಯವಾಗಿ ನಾವು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಕಾರು ಅಡ್ಡ ಹಾಕಿ ನಮ್ಮ ಗ್ರಾಮದ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಹಾಗೂ ಶಾಸಕರು ನಮ್ಮ ಸಮಸ್ಯೆಗೆ ಸ್ಪಂದಿಸಿ ಆದಷ್ಟು ಬೇಗನೆ ಕೆಲಸ ಪ್ರಾರಂಭ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಹೇಳಿದರು.
ಘೇರಾವ್ ಹಾಕಿರುವ ವಿಷಕ್ಕೆ ಸಂಬಂಧಿಸಿದಂತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿ, ನನ್ನನ್ನು ಯಾರೂ ಘೇರಾವ್ ಹಾಕಲಿಲ್ಲ, ನಾನು ಅವರ ಸೇವಕ. ಕ್ಷೇತ್ರದ ಕೆಲಸ ಕೇಳುತಿದ್ದಾರೆ, ತಪ್ಪಾಗಿ ಘೇರಾವ್ ಹಾಕಿದರು ಎಂದು ತಿಳಿಕೊಳ್ಳಬೇಡಿ, ನಮ್ಮ ಗ್ರಾಮಕ್ಕೆ ಬನ್ನಿ ಸಮಸ್ಯೆ ಆಲಿಸಿ ಎಂದು ಮನವಿ ಮಾಡಿಕೊಂಡರು. ನಾನು ನಂದೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದರು.
ರಸ್ತೆಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ
ಬಹುದಿನಗಳ ಬೇಡಿಕೆಯಾಗಿದ್ದ ಹಿಪ್ಪರಗಿ ಆಣೆಕಟ್ಟಿನಿಂದ ಝಿರೋಪಾಯಿಂಟ್ ರಸ್ತೆಯನ್ನು ೨ ಕೋಟಿ ೩೨ ಲಕ್ಷ ರೂಗಳ ವೆಚ್ಚದಲ್ಲಿ ೬ ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದೆಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ತಾಲೂಕಿನ ಹಿಪ್ಪರಗಿ ಗ್ರಾಮದಿಂದ ಝಿರೋಪಾಯಿಂಟ್ ವರೆಗಿನ ನೀರಾವರಿ ನಿಗಮದ ಇಲಾಖೆಯ ಅನುದಾನದಲ್ಲಿ ಮುಂಜೂರಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಸುಸಜ್ಜಿತ ಸಂಪರ್ಕ ರಸ್ತೆ ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿದ್ದಪ್ಪ ಮುದಕಣ್ಣವರ , ಶ್ರೀಶೈಲ ಗಸ್ತಿ, ಡಿ ಬಿ ಠಕ್ಕಣ್ಣವರ, ರಾಮಣ್ಣ ಪರಟ್ಟಿ, ಶಿವಕುಮಾರ ಪಾಟೀಲ, ಜಡೆಪ್ಪಾ ಕುಂಬಾರ, ಮಲ್ಲಪ್ಪ ಹಂಚಿನಾಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ ಕೆ ಜಾಲಿಬೇರಿ, ಎಸ್ ಜಿ ರಾಠೋಡ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ