*ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ರೊಬೊಟಿಕ್ ವಿಧಾನದ ಶಸ್ತ್ರಚಿಕಿತ್ಸೆ ಯಶಸ್ವಿ: ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯರ ಸಾಧನೆ*
ಪ್ರಗತಿವಾಹಿನಿ ಸುದ್ದಿ: ಕಳೆದ 2 ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆಗಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿದ್ದ. ಅವಶ್ಯವಿರುವ ತಪಾಸಣೆಗೊಳಪಡಿಸಿದಾಗ ರೋಗಿಯು ದೀರ್ಘಕಾಲದ ಕ್ಯಾಲ್ಸಿಫಿಕ್ ಪ್ಯಾಂಕ್ರಿಯಾಟೈಟಿಸ್ ಎಂಬ ರೋಗದಿಂದ ಬಳಲುತ್ತ, ಮೇದೋಜ್ಜೀರಕ ಗ್ರಂಥಿಯ ನಾಳದಲ್ಲಿ ಹರಳುಗಳಿರುವದು ಕಂಡುಬಂದಿತ್ತು.
ಅತ್ಯಂತ ಸಂಕೀರ್ಣವಾದ ಪರಿಸ್ಥಿಯಾಗಿದ್ದರಿಂದ ರೊಬೋಟಿಕ್ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಿ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಾಜಿ ವಿಭಾಗದ ಡಾ. ಸುದರ್ಶನ್ ಚೌಗಲಾ ಹಾಗೂ ಅವರ ತಂಡವು ಯಶಸ್ವಿಯಾಗಿದೆ.
ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ರೊಬೊಟಿಕ್ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಬೈಲಹೊಂಗಲ ತಾಲೂಕಿನ ಹಳ್ಳಿಯೊಂದರ 32 ವರ್ಷದ ಯುವಕನೋರ್ವನಿಗೆ (ಲ್ಯಾಟರಲ್ ಪ್ಯಾಂಕ್ರಿಯಾಟಿಕೋಜೆಜುನೋಸ್ಟೊಮಿ) ಮೇದೋಜ್ಜೀರಕ ಗ್ರಂಥಿಯ ಮೇಲ್ಗಡೆ ಇದ್ದ ಹರಳುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವದು ಅತ್ಯಂತ ಕ್ಲಿಷ್ಟಕರವಾಗಿತ್ತು. ಅನ್ನನಾಳ ಮತ್ತು ಮೇದೋಜ್ಜೀರಕ ಗ್ರಂಥಿಯ ನಳಿಕೆಯಲ್ಲಿ ಸುಮಾರು 2 ಸೆ.ಮೀ.ರಷ್ಟು ದೊಡ್ಡದಾದ 3 ಹರಳುಗಳಿದ್ದವು. ಅವುಗಳನ್ನು 0.5 ಸೆ.ಮೀ.ನಷ್ಟು ತುಂಡರಿಸಿ, ಸುಮಾರು 7 ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಹರಳುಗಳನ್ನು ಹೊರತೆಗೆಯಲಾಯಿತು.
ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ (ಮೇದೋಜ್ಜೀರಕ ಗ್ರಂಥಿ) ಉರಿಯೂತದ ಸದಾ ಬೆಳೆಯುತ್ತಿರುವ ಕಾಯಿಲೆಯಾಗಿದ್ದು, ಹರಳು ಮತ್ತು ವ್ಯವಸ್ಥಿತ ರಚನೆಯೊಂದಿಗೆ ಮೇಲಿಂದ ಮೇಲೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದು ಔಷಧಿಗಳಿಂದ ಕಡಿಮೆಯಾಗದಿರುವ ಕಾರಣ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಪ್ಯಾಂಕ್ರಿಯಾಟಿಕ್ನ್ ಹರಳುಗಳನ್ನು ಹೊರತೆಗೆದು, ಸಣ್ಣ ಕರುಳು ಹಾಗೂ ಮೇದೋಜ್ಜೀರಕ ಗ್ರಂಥಿಯ ನಾಳವನ್ನು ಜೋಡಿಸಲಾಗುತ್ತದೆ. ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಪ್ಯಾನಕ್ರಿಯ ಸುತ್ತ ವಿವಿಧ ಅಂಗಗಳಿಗೆ ರಕ್ತನಾಳಗಳು ಅಂಟಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯು ಅತ್ಯಂತ ಕಠಿಣ ಮತ್ತು ಸವಾಲಿನ ಕಾರ್ಯವಾಗಿತ್ತು.
ಸಾಮಾನ್ಯವಾಗಿ ಅತ್ಯಂತ ಕಷ್ಟದಿಂದ ಕೂಡಿದ್ದ ಇದನ್ನು ಸಂಪೂರ್ಣ ತೆರೆದು ಶಸ್ತ್ರಚಿಕಿತ್ಸೆ ನೆರವೇರಿಸಬೇಕಾಗಿತ್ತು. ಹೀಗಾದರೆ ದೊಡ್ಡ ಕರಳುನ್ನು ಕತ್ತರಿಸಬೇಕಾಗುತ್ತಿತ್ತು. ಇದರಿಂದ ರೋಗಿಯು ಚೇತರಿಸಿಕೊಳ್ಳುವದು ತೀವ್ರ ವಿಳಂಭವಾಗಿ ಗಾಯದ ಸೋಂಕು ಮತ್ತು ಆಹಾರ ತೆಗೆದುಕೊಳ್ಳುವಲ್ಲಿ ವಿಳಂಭವಾಗಿ ಮತ್ತೆ ಬೇರೆ ತೊಂದರೆಯುಂಟಾಗಿ ಮತ್ತೆ ಶಸ್ತ್ರಚಿಕಿತ್ಸೆಗೊಳಗಾಗುವ ಅಪಾಯವಿತ್ತು. ಆದ್ದರಿಂದ ಈ ಎಲ್ಲ ತೊಂದರೆಗಳನ್ನು ತಪ್ಪಿಸಲು ರೊಬೊಟಿಕ್ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು ಎಂದು ಡಾ. ಸುದರ್ಶನ್ ಹೇಳಿದ್ದಾರೆ.
ರೋಬೋಟಿಕ್ ಸರ್ಜನ್ ಮತ್ತು ಅಡ್ವಾನ್ಸ್ಡ್ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕರಾದ ಡಾ.ಸುದರ್ಶನ ಚೌಗಲೆ ಅವರಿಗೆ, ಜಿಐ ಶಸ್ತ್ರಚಿಕಿತ್ಸಕ ಡಾ ಕಿರಣ್ ಉರಬಿನಹಟ್ಟಿ ಮತ್ತು ಡಾ ಕಾನಿಷ್ಕಾ ದಾಸ್, ಅರವಳಿಕೆ ತಜ್ಞವೈದ್ಯರಾದ ಡಾ. ರಾಜೇಶ ಮಾನೆ ಹಾಗೂ ಡಾ. ಗುರುಪ್ರಸಾದ ಅವರು ಸಹಕರಿಸಿದರು. ಶಸ್ತ್ರಚಿಕಿತ್ಸೆಯಾದ ಕೇವಲ 5 ದಿನಗಳಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಡಾ (ಕರ್ನಲ್). ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ