ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇಲ್ಲಿನ ರೋಹಿಣಿ ಕೋರ್ಟ್ ಶೂಟೌಟ್ ಪ್ರಕರಣದ ಆರೋಪಿ ಮತ್ತು ಗ್ಯಾಂಗ್ ಸ್ಟರ್ ಟಿಲ್ಲೂ ತೇಜ್ಪುರಿಯಾ @ ಸುನೀಲ್ ಮಾನ್ ನನ್ನು ಎದುರಾಳಿ ಗ್ಯಾಂಗ್ನವರು ದೆಹಲಿಯ ತಿಹಾರ್ ಜೈಲಿನಲ್ಲಿ ಹತ್ಯೆ ಮಾಡಿದ್ದಾರೆ.
ಗ್ಯಾಂಗ್ ಸ್ಟರ್ ಯೋಗೇಶ್ ತುಂಡಾ ಮತ್ತು ಆತನ ಸಹಚರರು ಮಂಗಳವಾರ ಬೆಳಗ್ಗೆ ಕಬ್ಬಿಣದ ಸರಳುಗಳಿಂದ ಟಿಲ್ಲೂ ಮೇಲೆ ಹಲ್ಲೆ ಮಾಡಿದರು. ಗಂಭೀರ ಗಾಯಗೊಂಡಿದ್ದ ಆತನನ್ನು ಪಂಡಿತ್ ದೀನ್ ದಯಾಳ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾಗಿ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಟಿಲ್ಲೂ ತೇಜ್ಪುರಿಯಾ 2021ರ ಸೆಪ್ಟೆಂಬರ್ 24 ರಂದು ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ. ಕೋರ್ಟ್ನ 206ನೇ ಸಂಖ್ಯೆ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಜೀತೇಂದ್ರ ಗೋಗಿಯನ್ನು ಕರೆತರುತ್ತಿದ್ದಾಗ ವಕೀಲರ ದಿರಿಸಿನಲ್ಲಿ ಬಂದು ಶೂಟೌಟ್ ನಡೆಸಲಾಗಿತ್ತು. ಗ್ಯಾಂಗ್ ಸ್ಟಾರ್ ಜಿತೇಂದ್ರ ಗೋಗಿ ಮತ್ತು ಇತರ ಮೂವರು ಈ ಘಟನೆಯಲ್ಲಿ ಮೃತಪಟ್ಟಿದ್ದರು.
ಈ ವೇಳೆ ದೆಹಲಿ ವಿಶೇಷ ಘಟಕದ ಪೊಲೀಸರು ಗುಂಡಿನ ದಾಳಿ ನಡೆಸಿದ ಇಬ್ಬರನ್ನು ಹತ್ಯೆ ಮಾಡಿದ್ದರು. ಜಿತೇಂದ್ರ ಗೋಗಿ ಮತ್ತು ಟಿಲ್ಲೂ ಗ್ಯಾಂಗ್ ನಡುವೆ ಈ ಹಿಂದೆಯೂ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣ ಆರೋಪಿಗಳಾದ ಗೋಗಿ ಹಾಗೂ ಟಿಲ್ಲೂ ಗ್ಯಾಂಗ್ನ ಸದಸ್ಯರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
30ಕ್ಕೂ ಅಧಿಕ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಿತೇಂದ್ರ ಗೋಗಿಯನ್ನು ಕೊಲೆಗೈಯ್ಯಲು ಟಿಲ್ಲೂ ತೇಜ್ಪುರಿಯಾ ಫೋನ್ ಮೂಲಕವೇ ಸೂಚನೆ ನೀಡಿದ್ದ ಎನ್ನಲಾಗಿತ್ತು.
2021ರಲ್ಲಿಯೇ ಟಿಲ್ಲೂ ತೇಜ್ಪುರಿಯಾ ಹತ್ಯೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಜಿತೇಂದ್ರ ಗೋಗಿ ಹತ್ಯೆ ನಂತರ ಇಂಥ ಘಟನೆಯೊಂದು ನಡೆಯಲಿರುವ ಅಂದಾಜಿನ ಮೇಲೆ ಜೈಲಿನಲ್ಲಿ ಬಿಗಿ ಭದ್ರತೆ ಇರಿಸಿದಾಗಲೂ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ