ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತ-ಚೀನಾ ಸೈನಿಕರ ನಡುವೆ ಲಡಾಖ್‍ನ ಗಾಲ್ವಾನ್ ಗಡಿಯಲ್ಲಿ ಸಂಭವಿಸಿದ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 5 ಕೋಟಿ ರೂ. ಪರಿಹಾರ ಹಾಗೂ ಸಂತೋಷ್ ಬಾಬು ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಫೋಷಿಸಿದ್ದಾರೆ.
ಸಿಎಂ ಕೆ.ಚಂದ್ರಶೇಖರ್ ರಾವ್ ಕರ್ನಲ್ ಸಂತೋಷ್ ಬಾಬು ಅವರ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಐದು ಕೋಟಿ ರೂ. ಪರಿಹಾರದ ಜೊತೆಗೆ ಕುಟುಂಬಕ್ಕೆ ಮನೆ ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಹುತಾತ್ಮರಾದ ಯೋಧರ ಕುಟುಂಬದವರಿಗೆ ಸಹಾಯವನ್ನು ನೀಡುತ್ತದೆ. ಆದರೆ ರಾಜ್ಯಗಳು ಸಹ ಅವರಿಗೆ ಸಹಾಯ ಮಾಡಬೇಕು. ಆಗ ಮಾತ್ರ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ದೇಶವು ನಮ್ಮ ಬೆಂಬಲವಾಗಿ ನಿಂತಿದೆ ಎಂಬ ವಿಶ್ವಾಸವನ್ನು ಹೊಂದುತ್ತಾರೆ. ನಾವೆಲ್ಲರೂ ಒಟ್ಟಾಗಿ ರಕ್ಷಣಾ ಪಡೆಗಳ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಸಿಎಂ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಭಾರತ-ಚೀನಾ ಗಡಿ ಗಾಲ್ವಾನ್ ನದಿ ಪ್ರದೇಶದಲ್ಲಿ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಚೀನಾ ಟೆಂಟ್ ನಿರ್ಮಿಸಿತ್ತು. ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ಪಾಯಿಂಟ್ 14ನಲ್ಲಿ ಸಭೆ ನಡೆಸಿ ಟೆಂತ್ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಇದನ್ನು ಪರಿಶೀಲನೆ ನಡೆಸಲು ಕರ್ನಲ್ ಸಂತೋಷ್ ಬಾಬು, ಪಳನಿ, ಓಝೋ ಗಸ್ತು ಹೋಗಿದ್ದರು. ಆದರೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ ತೆರವು ಮಾಡದ ಹಿನ್ನೆಲೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗಲೇ ಚೀನಿ ಸೈನಿಕರು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ವಿಚಾರ ತಿಳಿದು ಭಾರತದ ಸೈನಿಕರು ಮತ್ತಷ್ಟು ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾವಣೆಗೊಳ್ಲುತ್ತಿದ್ದಂತೆಯೇ ಚೀನಿ ಸೈನಿಕರು ಕಲ್ಲು ತೂರಾಟ ನಡೆಸಿ ಕಬ್ಬಿಣದ ರಾಡ್‍ಗಳಿಂದ ಭಾರತದ ಸೈನಿಕರನ್ನು ಹೊಡೆದಿದ್ದಾರೆ. ಉಭಯ ಸೈನಿಕರ ನಡುವೆ ಸಂಘರ್ಷವೇರ್ಪಟ್ಟಿದ್ದು, ಪರಿಣಾಮ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ