ಲೋಕೋಪಯೋಗಿ ಇಲಾಖೆಯಡಿ ರಸ್ತೆ ಕಾಮಗಾರಿಗಳಿಗೆ ರೂ.88.77 ಕೋಟಿ ಅನುದಾನ – ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಲೋಕೋಪಯೋಗಿ ಇಲಾಖೆಯಿಂದ ಎಸ್‌ಎಚ್‌ಡಿಪಿ ಯೋಜನೆಯಡಿ ಕೈಗೊಂಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಕಾಮಗಾರಿಗೆ ೧೦ ಕಿ.ಮೀ. ಉದ್ದದ ರಸ್ತೆಗೆ ರೂ.೨೦ ಕೋಟಿ, ೨೦೨೨-೨೩ನೇ ಸಾಲಿನ ಲೆಕ್ಕ ಶಿರ್ಷಿಕೆ ೫೦೫೪ಯಡಿ ರಾಜ್ಯ ಹೆದ್ದಾರಿಯ ೨೯.೮೬ ಕಿ.ಮೀ. ಉದ್ದ ರಸ್ತೆ ಕಾಮಗಾರಿಗಳು-ಸುಧಾರಣೆಗಾಗಿ ರೂ.೩೬.೪೦ ಕೋಟಿ, ೨೮.೨೦ ಕಿ.ಮೀ. ಉದ್ದ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗಳಿಗಾಗಿ ರೂ.೨೫.೦೭ ಕೋಟಿ, ವಿವಿಧ ಕಟ್ಟಡ ಕಾಮಗಾರಿಗಳಿಗಾಗಿ ರೂ.೭.೩೦ ಕೋಟಿ ಸೇರಿದಂತೆ ಈಚೆಗೆ ಸುಮಾರು ರೂ.೮೮.೭೭ ಕೋಟಿ ಅನುದಾನ ಅನುಮೋದನೆಗೊಂಡಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಜರುಗಿಸಿ ಮಾತನಾಡಿದ ಅವರು ಇವುಗಳಲ್ಲಿ ನಗರದ ಪಾರ್ವತಿ ಕಾರ್ನರ್‌ದಿಂದ ಅಕ್ಕೋಳ ಗ್ರಾಂದವರೆಗಿನ ಸುಮಾರು ೧೦ ಕಿ.ಮೀ. ರಸ್ತೆ ಸುಧಾರಣೆ(ರೂ.೨೦ ಕೋಟಿ), ಶ್ರೀಪೇವಾಡಿ, ಜತ್ರಾಟ, ಭಿವಶಿ, ಸೌಂದಲಗಾವರೆಗೆ ರಸ್ತೆ ಸುಧಾರಣೆ(ರೂ.೪.೯೫ ಕೋಟಿ), ಹಳೆಯ ಪಿ. ರಸ್ತೆ ಬೆಳಗಾವಿ ನಾಕಾದಿಂದ ಬಸ್ ನಿಲ್ದಾಣ ಮೂಲಕ ಕೊಲ್ಹಾಪೂರ ನಾಕಾವರೆಗೆ ನವೀಕರಣ(ರೂ.೬.೫೦ ಕೋಟಿ), ಕೊಗನೋಳಿಯಿಂದ ಹಂಚಿನಾಳವರೆಗೆ ರಸ್ತೆ ಸುಧಾರಣೆ(ರೂ.೪.೯೫ ಕೋಟಿ), ನಿಪ್ಪಾಣ -ಕೊಟ್ಟಲಗಿ ರಾ.ಹೆ.೭೨ರ ಲಖನಾಪೂರ ಗ್ರಾಮದ ಹತ್ತಿರ ಬ್ರಿಜ್ ನಿರ್ಮಾಣ(ರೂ.೫ ಕೋಟಿ) ಸೇರಿವೆ. ಕಟ್ಟಡ ಕಾಮಗಾರಿಗಳಲ್ಲಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಹೆಚ್ಚುವರಿ ಕೊಠಡಿ(ರೂ.೨.೫೦ ಕೋಟಿ), ನಗರದಲ್ಲಿ ಸರ್ಕಾರಿ ಐಟಿಐ ಕಾಲೇಜು ಕಟ್ಟಡ(ರೂ.೨.೩೦ ಕೋಟಿ), ನಗರದಲ್ಲಿ ನ್ಯಾಯಾಧೀಶರ ವಸತಿ ನಿರ್ಮಾಣ(ರೂ.೧.೫ ಕೋಟಿ), ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕ/ವಸ್ತು ಸಂಗ್ರಹಾಲಯ/ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸುವುದು(ರೂ.೧ ಕೋಟಿ) ಸೇರಿವೆ ಎಂದರು.
ಈ ಮೂಲಕ ಕ್ಷೇತ್ರದಲ್ಲಿ ನನ್ನ ಆಡಳಿತಾವಧಿಯಲ್ಲಿ ಸುಮಾರು ೨ ಸಾವಿರ ಕೋಟಿಗೂ ಅಧಿಕ ಅಭಿವೃಧಿ ಕಾಮಗಾರಿಗಳು ನಡೆದಂತಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಾವಿಬ್ಬರೂ ಅವಿರತವಾಗಿ ಶ್ರಮಿಸುತ್ತಿದ್ದು ಮಾದರಿ ಕ್ಷೇತ್ರ ಮಾಡಲಾಗುವುದು. ಅಭಿವೃದ್ಧಿಯೊಂದಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಗರಿಕರಿಗೆ ಮನೋರಂಜನಾ ಕಾರ್ಯಕ್ರಮಗಳನ್ನೂ ಸಹ ಆಯೋಜಿಸುತ್ತಿದ್ದೇವೆ. ಈಚೆಗೆ ಅಖಿಲ ಭಾರತ ಎ ಗ್ರೇಡ್ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ, ಅಂತರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಫೆ.೪ ಮತ್ತು ೫ ರಂದು ವೀರರಾಣಿ ಕಿತ್ತೂರ ಚನ್ನಮ್ಮ ಅವರ ಇತಿಹಾಸ ಸಾರುವ ಮಹಾನಾಟಕವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ದೀಪಕ ಪಾಟೀಲ, ಪ್ರಣವ ಮಾನವಿ, ಸದಸ್ಯರು ಉಪಸ್ಥಿತರಿದ್ದರು.
https://pragati.taskdun.com/ivf-treatment-available-for-low-price-in-siddagiri-hospital/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ