Latest

ಅಪ್ಪಟ ಗ್ರಾಮೀಣ ಪ್ರತಿಭೆ ಈಗ ಕರ್ನಾಟಕ ವಿಧಾನಸಭೆಯ ಸ್ಪೀಕರ್

ಅಪ್ಪಟ ಗ್ರಾಮೀಣ ಪ್ರತಿಭೆ ಈಗ ಕರ್ನಾಟಕ ವಿಧಾನಸಭೆಯ ಸ್ಪೀಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಅಪ್ಪಟ ಹಳ್ಳಿ ಶಾಲೆಯಲ್ಲಿ ಓದಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಮೂಲಕ ಬೆಳೆದುಬಂದ ಸೌಮ್ಯ ಸ್ವಭಾವದ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕರ್ನಾಟಕ ವಿಧಾನಸಭೆಯ ಸ್ಪೀಕರ್.

ಬುಧವಾರ ಕಾಗೇರಿ ಅವರು ಅವಿರೋಧವಾಗಿ ಸ್ಪೀಕರ್ ಆಗಿ ಆಯ್ಕೆಯಾದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ ಕುಮಾರ, ಜೆಡಿಎಸ್ ನಾಯಕ ಎಚ್.ಕೆ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೊದಲಾದವರು ವಿಶ್ವೇಶ್ವರ ಹೆಗಡೆ ಅವರನ್ನು ಅಭಿನಂದಿಸಿ ಮಾತನಾಡಿದರು.

ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಬೆಳಗಾವಿ ಶಾಸಕ ಅನಿಲ ಬೆನಕೆ ಮತ್ತಿತರರು

ಅಂಕೋಲಾ ವಿಧಾನ ಸಭೆ ಕ್ಷೇತ್ರದಿಂದ (ನಂತರ ಶಿರಸಿ ಕ್ಷೇತ್ರ ಎಂದು ಬದಲಾಗಿದೆ) 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ, ಆ ಭಾಗದಲ್ಲಿ ಪ್ರಭಾವಶಾಲಿಯಾಗಿರುವ ಹವ್ಯಕ ಬ್ರಾಹ್ಮಣ ಸಮಾಜಕ್ಕೆ ಸೇರಿದವರು.

Home add -Advt

1961ರ ಜುಲೈ 10ರಂದು ಶಿರಸಿ ತಾಲೂಕಿನ ಕಾಗೇರಿ ಎನ್ನುವ ಹಳ್ಳಿಯಲ್ಲಿ ಜನಿಸಿರುವ ಅವರು, ಬರೂರು ಎನ್ನುವ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿಯಲ್ಲಿ ಅವರು ಸಕ್ರೀಯರಾಗಿದ್ದರು. ಶಿರಸಿಯಲ್ಲೇ ಬಿಕಾಂ ಪದವಿ ಪೂರೈಸಿ, ನಂತರ ರಾಜಕೀಯಕ್ಕೆ ಇಳಿದರು.

ಬೇಡ್ತಿ ಅಘನಾಶಿನಿ ಹೋರಾಟ ಸೇರಿದಂತೆ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದ ಅವರು, ಸ್ವರ್ಣವಲ್ಲೀ ಮಹಾಸಂಸ್ಥಾನದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2008ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು ಇದೀಗ ಪಕ್ಷದ ಹೈಕಮಾಂಡ್ ಸೂಚನೆಯಂತೆ ಸ್ಪೀಕರ್ ಹುದ್ದೆಗೇರಿದ್ದಾರೆ.

ಶಿವರಾಮ ಹೆಬ್ಬಾರ

ಉತ್ತರ ಕನ್ನಡದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಿವರಾಮ ಹೆಬ್ಬಾರ ಕೂಡ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಶಾಸಕತ್ವಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುವ ಹೊಸ್ತಿಲಲ್ಲಿರುವ ಶಿವರಾಮ ಹೆಬ್ಬಾರ್ ಅವರಿಗೆ ಸಚಿವಸ್ಥಾನ ನೀಡಬೇಕಿರುವ ಹಿನ್ನೆಲೆಯಲ್ಲಿ ಕಾಗೇರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿವರಾಮ ಹೆಬ್ಬಾರ ಕೂಡ ಮೂಲತಃ ಬಿಜೆಪಿಯವರು. ಬಿಜೆಪಿಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಕಾಗೇರಿ ಮತ್ತು ಹೆಬ್ಬಾರ್ ಕೂಡಿ ಬಿಜೆಪಿ ಕಟ್ಟಿದ್ದಾರೆ. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ್ ಕಾಂಗ್ರೆಸ್ ಸೇರಿದ್ದರು.

 

 

 

 

 

Related Articles

Back to top button