*ಎಸ್.ಜಾನಕಿ ಅವರ ಸ್ಮಾರಕ ನಿರ್ಮಿಸಬೇಕು: ಸರ್ಕಾರಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಮನವಿ*

ಪ್ರಗತಿವಾಹಿನಿ ಸುದ್ದಿ: ಗಾನಕೋಗಿಲೆ ಎಸ್.ಜಾನಕಿ ಅವರ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ಹಂಸಲೇಖ, ಕರುನಾಡಿನ ಮಣ್ಣಲ್ಲಿ ಜಾನಕಿ ಅಮ್ಮ ಕಣ್ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಕಣ್ಣು ತೆರೆಯಬೇಕು. ಅವರ ಸ್ಮಾರಕ ನಿರ್ಮಾಣವಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಹಂಸಲೇಖ, ಜಾನಕಿ ಅಂದ್ರೆ ಸೀತೆ. ಸೀತೆ ಅಂದ್ರೆ ನಮಗೆ ಗೀತೆ. ಆಕೆಯ ಆಸೆ ಕರುನಾಡಿನಲ್ಲಿ ಇರೋದು. ನಾವು ಅದಕ್ಕೆ ಇಂಬು ಕೋಡೋದು ಬೇಡವೇ? ಅವರ ಸ್ಮಾರಕ ಆಗಬೇಕು. ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರೋಣ ಎಂದು ಕರೆ ನೀಡಿದ್ದಾರೆ.
ಜಾನಕಿಯವರದ್ದು ಪರಿಪೂರ್ಣ ಜೀವನ, 88 ವರ್ಷ ಪೂರೈಸಿದ್ದಾರೆ. ಅವರು ದೇವರ ಭಕ್ತರು. ಸಂಗೀತ ಎಂಬುದು ದೇವರು, ಸಂಗೀತ ಎಲ್ಲಾ ದೇವರಿಗೆ ಪ್ರಿಯ. ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಜಾನಕಿಯವರ ಸ್ಮಾರಕ ನಿರ್ಮಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಡಾ.ಜಯಮಾಲಾ ಅವರಿಗೆ ಕರೆ ಮಾಡಿ ಮಾತನಾಡಿರುವ ಹಂಸಲೇಖ, ಎಸ್.ಜಾನಕಿ ಅವರ ಸ್ಮಾರಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸವಾಗಬೇಕು ಎಂದು ಮನವಿ ಮಾಡಿದ್ದಾರೆ.




