Kannada NewsKarnataka NewsLatest

*ಕಣಿಯನಹುಂಡಿ ತೋಟದಲ್ಲಿ ನಡೆಯಲಿದೆ ಗಾನಕೋಗಿಲೆ ಎಸ್.ಜಾನಕಿ ಅಂತ್ಯಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದಲ್ಲಿ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಕಣಿಯನಹುಂಡಿ ಗ್ರಾಮದ ಅವರ ತೋಟದಲ್ಲಿಯೇ ಇಂದು ಸಂಜೆ 5:30ರ ವೇಳೆಗೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ. ಜಾನಕಮ್ಮ ಅವರು ಬದುಕಿದ್ದಾಗ, ತಮ್ಮ ನಿಧನದ ನಂತರ ತಮ್ಮ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಅವರ ಕೊನೆಯ ಕೋರಿಕೆಯಂತೆ ಕಣಿಯನಹುಂಡಿ ಗ್ರಾಮದಲ್ಲಿರುವ ಅವರ ತೋಟದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ.

Home add -Advt

ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಜೆಸಿಬಿ ಯಂತ್ರಗಳ ಮೂಲಕ ತೋಟದ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಎಸ್. ಜಾನಕಿ ಅವರು ತಮ್ಮ ಬದುಕಿನ ಕಡೆಯ ದಿನಗಳನ್ನು ಕಣಿಯನಹುಂಡಿ ಗ್ರಾಮದಲ್ಲೇ ಕಳೆಯಲು ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರು ಇಲ್ಲಿ ಎರಡು ಎಕರೆ ಜಮೀನನ್ನು ಖರೀದಿ ಮಾಡಿಸಿದ್ದರು. ನಾವೇ ಖುದ್ದಾಗಿ ನಿಂತು ಅವರಿಗೆ ಈ ಜಮೀನನ್ನು ಕೊಡಿಸಿದ್ದೆವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬಹಳ ಪ್ರೀತಿಯಿಂದ ಜಮೀನು ಕೊಂಡಿದ್ದ ಜಾನಕಿಯಮ್ಮ ಅವರು, ಅಲ್ಲಿ ತಮಗಾಗಿ ಒಂದು ಸುಂದರವಾದ ಮನೆಯನ್ನು ಕಟ್ಟುವ ಬಗ್ಗೆಯೂ ನಮ್ಮೊಂದಿಗೆ ಹಲವು ಬಾರಿ ಮಾತನಾಡಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಕಡೆಯ ದಿನಗಳಲ್ಲಿ ಅವರು ಕಟ್ಟಬಯಸಿದ್ದ ಮನೆಯ ಜಾಗದಲ್ಲೇ, ಅವರ ಕೊನೆಯ ಆಸೆಯಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿಸಿದ್ದಾರೆ.


Related Articles

Back to top button