*ಕಾಂಗ್ರೆಸ್ ಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ ಎಸ್.ಕೆ.ಬಸವರಾಜನ್*
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷದಲ್ಲಿ ಬಂಡಾಯದ ಬೇಗುದಿ ಆರಂಭವಾಗಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಚಿತ್ರದುರ್ಗ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೊಟಗೊಂಡಿದ್ದು, ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ ಸಿ ರಘು ಆಚಾರ್ ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯ ಅವರನ್ನು ಚುನಾವಣಾ ಅಖಾಡಕ್ಕಿಳಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮಾತನಾಡಿದ ಬಸವರಾಜನ್, ಕಾಂಗ್ರೆಸ್ ಟಿಕೆಟ್ ಹರಾಜಾಗಿದೆ. ಒಂದು ಚುನಾವಣೆ ಮಾಡುವಷ್ಟು ಹಣಕ್ಕೆ ಕಾಂಗ್ರೆಸ್ ಟಿಕೆಟ್ ಹರಾಜಾಗಿದೆ. ಹರಾಜು ಕೂಗಿ ಟಿಕೆಟ್ ನೀಡಿದ್ದಾರೆ. ಹಾಗಾಗಿ ನಾನು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ