Karnataka News

*ರಾಜ್ಯ ಮುತ್ಸದ್ದಿ ರಾಜಕಾರಣಿ, ಮಾರ್ಗದರ್ಶಕರನ್ನು ಕಳೆದುಕೊಂಡಿದೆ: ಸಂಸದ ಕಾಗೇರಿ ಕಂಬನಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು, ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ವಿದೇಶಾಂಗ ಸಚಿವರು, ಮಾಜಿ ರಾಜ್ಯಪಾಲರೂ ಆಗಿದ್ದ ಎಸ್.ಎಂ.ಕೃಷ್ಣ ಅವರು ಸ್ವರ್ಗಸ್ಥರಾದ ವಾರ್ತೆಯನ್ನು ತಿಳಿದು ಅತೀವ ದುಃಖವಾಗಿದೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

ಸದಾ ಹಸನ್ಮುಖಿ ಹಾಗೂ ಅಪಾರ ಅನುಭವ‌ ಹೊಂದಿದ್ದ ಶ್ರೀಯುತರು ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರು‌ ನಗರದ ಅಭಿವೃದ್ಧಿಗೆ ರೂವಾರಿಯಾಗಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ, ಯೋಗದಲ್ಲಿ ಹಾಗೂ ಲಾನ್ ಟೆನ್ನಿಸ್ ಆಟದಲ್ಲಿ ವಿಶೇಷವಾದ ಆಸಕ್ತಿ‌ಹೊಂದಿದ್ದರು. ನಮ್ಮ ರಾಜ್ಯವು ಕಂಡ ಉನ್ನತ ಶಿಕ್ಷಣ ಪಡೆದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಆಡಳಿತ ಯಂತ್ರವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಅವರಿಲ್ಲಿದ್ದ ಅನೇಕ ಗುಣಗಳಲ್ಲಿ ಒಂದು. ನನಗೆ ಚಿರಪರಿಚಿತರಾಗಿದ್ದ ಶ್ರೀಯುತರು ಅನೇಕ‌ ಬಾರಿ ಆಡಳಿತಾತ್ಮಕವಾದ ಸಲಹೆ ಸೂಚನೆಗಳನ್ನು ನೀಡಿದ್ದರು.

ಶ್ರೀಯುತರ ಅಗಲಿಕೆಯಿಂದ ನಮ್ಮ‌ ರಾಜ್ಯವು ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು, ಮಾರ್ಗದರ್ಶಕರನ್ನು, ರಾಜಕೀಯ ಭೀಷ್ಮನನ್ನು ಕಳೆದುಕೊಂಡಂತಾಗಿದೆ.

ಶ್ರೀ ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ, ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button