*ಯಡಿಯೂರಪ್ಪ ಏನೋ ಹೇಳಿದ್ದಾರೆ…ಏನದು? ಎಸ್.ಟಿ.ಸೋಮಶೇಖರ್ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಕ್ಕೆ ಉಭಯ ಪಕ್ಷಗಳಲ್ಲಿಯೇ ಅಸಮಾಧಾನ ಸ್ಫೋಟಗೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಬಹಿರಂಗವಾಗಿಯೇ ಬೇಸರ ಹೊರಹಾಕುತ್ತಿದ್ದಾರೆ. ಇದೀಗ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ,ಸೋಮಶೇಖರ್, ಯಾವ ಉದ್ದೇಶಕ್ಕೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಮೈತ್ರಿಗೆ ವೈಯಕ್ತಿಕವಾಗಿ ನನ್ನ ಸಹಮತವಿಲ್ಲ. ನನಗೆ ಅಸಮಾಧಾನವಿದೆ ಎಂದು ನೇರವಾಗಿ ಹೇಳಿದ್ದಾರೆ.
ಇವರು ಯಾವ ಉದ್ದೇಶಕ್ಕೆ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ದಾರೆ? ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಹೊಂದಾಣಿಕೆ ಸಾಧ್ಯವಿಲ್ಲ ಎಂದೇ ನಾವೆಲ್ಲರೂ ಮೈತ್ರಿ ಬಗ್ಗೆ ಅಸಮಾಧಾನಗೊಂಡು ಪಕ್ಷಗಳನ್ನು ತೊರೆದು ಬಿಜೆಪಿಗೆ ಬಂದೆವು. ಈಗ ಬಿಜೆಪಿಯಲ್ಲಿಯೂ ಮತ್ತದೇ ಮೈತ್ರಿಗೆ ಮುಂದಾಗಿದ್ದಾರೆ ಎಂದರೆ ಬೇಸರವಾಗುತ್ತಿದೆ ಎಂದರು.
ಹಾಗೆ ನೋಡುವುದಾದರೆ ಬಿಜೆಪಿಗೆ ಜೆಡಿಎಸ್ ಕೂಡ ಎದುರಾಳಿಯೇ. ಅಂದಮೇಲೆ ಲೋಕಸಹೆಯಲ್ಲಿ ಇವರು ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿರುವುದರ ಹಿಂದಿನ ಉದ್ದೇಶವೇನು? ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಆದರೂ ಯಾರೂ ಕೂಡ ವೈಯಕ್ತಿಕವಾಗಿ ಮಾತನಾಡುತ್ತಿಲ್ಲ. ಎಲ್ಲರಿಗೂ ಅಸಮಾಧಾನವಿದೆ. ಮಾನಸಿಕವಾಗಿ ಕಿರುಕುಳವಿದೆ ಎಂದು ಹೇಳಿದರು.
ಒಂದು ವೇಳೆ ಎರಡೂ ಪಕ್ಷದ ನಾಯಕರು ಚುನಾವಣೆಗಾಗಿ ಒಂದಾಗಬಹುದು ಆದರೆ ಕಾರ್ಯಕರ್ತರಿಗೆ ಇದರಿಂದ ಹಿಂಸೆಯಾಗುತ್ತದೆ. ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಕಾರ್ಯಕರ್ತರಿಗೆ ಏನು ಗೌರವ ಕೊಡಬೇಕೋ ಕೊಡುತ್ತಿದ್ದೇವೆ ಎಂದರು.
ಇದೇ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತವಾದ ಮೇಲೆ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದಿರುವ ಸೋಮಶೇಖರ್, ನಮಗೆ ಹೈಕಮಾಂಡ್ ಅಂದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಅವರು ಏನೋ ಹೇಳಿದ್ದಾರೆ. ನಾನು ಹೇಳುವವರೆಗೂ ಏನೂ ಮಾತನಾಡಬೇಡ ಎಂದಿದ್ದಾರೆ. ಹಾಗಾಗಿ ಕಳೆದ 1 ತಿಂಗಳಿಂದ ನಾನು ಏನೂ ಮಾತನಾಡಿಲ್ಲ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ನನ್ನ ಸಹಮತವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ