Belagavi NewsBelgaum NewsKannada NewsKarnataka NewsLatest

*ಸಚಿವೆ ಹೆಬ್ಬಾಳಕರ್ ಬೇರೆ ಆಸ್ಪತ್ರೆಗೆ ಸ್ಥಳಾಂತರ?* *ವೈದ್ಯರು ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಮ್ಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ನಮ್ಮಲ್ಲಿ ತಜ್ಞ ನ್ಯೂರೋಲಾಜಿಸ್ಟ್, ಪಿಜಿಷಿಯನ್ ಮತ್ತು ಆರ್ಥೋ ಪಿಜಿಷಿಯನ್ಸ್ ಇರೋದ್ರಿಂದ ಬೇರೆ ಆಸ್ಪತ್ರೆಗೆ ರವಾನಿಸುವ ಅವಶ್ಯಕತೆ ಇಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ ಸ್ಪಷ್ಟಪಡಿಸಿದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಕಾರು ಚಾಲಕ ಮತ್ತು ಗನ್ ಮ್ಯಾನ್ ಅವರು ಬೆಳಿಗ್ಗೆ 6 ಗಂಟೆಗೆ ನಮ್ಮ ಆಸ್ಪತ್ರೆಗೆ ಆಗಮಿಸಿದ್ದರು. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬೆನ್ನು ಮತ್ತು ಕುತ್ತಿಗೆ ಭಾಗಕ್ಕೆ ಗಾಯವಾಗಿತ್ತು‌. ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆವು ಎಂದರು. 

ಬಳಿಕ ಅವರಿಗೆ ಎಂಆರ್‌ಐ ಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಬೆನ್ನು ಹುರಿಯಲ್ಲಿರುವ ಎಲ್-1, ಎಲ್-4 ಎಲುಬುಗಳಿಗೆ ಫ್ರ್ಯಾಕ್ಚರ್ ಆಗಿದ್ದು ದೃಢವಾಯಿತು. ಹಾಗಾಗಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ನೋವು ಹೆಚ್ಚಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಡಾ. ರವಿ ಪಾಟೀಲ ತಿಳಿಸಿದರು.

ಲಕ್ಷ್ಮೀ ಹೆಬ್ಬಾಳಕರ್ ಅವರು ಚಿಕಿತ್ಸೆಗೆ ಒಳ್ಳೆಯ ರೀತಿ ಸ್ಪಂದಿಸುತ್ತಿದ್ದಾರೆ. ಇನ್ನು ಚನ್ನರಾಜ ಹಟ್ಟಿಹೊಳಿ ಅವರ ತಲೆಗೆ ಪೆಟ್ಟಾಗಿತ್ತು. ಅವರಿಗೆ ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಅದರಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಕಂಡು ಬಂದಿದೆ. ಹಾಗಾಗಿ, ಅವರನ್ನು ಸಂಜೆ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದರು.

ಏರ್ ಬ್ಯಾಗ್ ಓಪನ್ ಆಗಿ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ಹೆಬ್ಬೆಟ್ಟಿಗೆ ಬಲವಾಗಿ ಗಾಯವಾಗಿದೆ. ಗನ್ ಮ್ಯಾನ್ ಗೆ ಬುಜ ಮತ್ತು ಎದೆಗೆ ಗಾಯವಾಗಿದೆ. ಇಬ್ಬರಿಗೂ ಯಾವುದೇ ರೀತಿ ಗಂಭೀರ ಗಾಯಗಳು ಆಗಿಲ್ಲ. ಆದ್ದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಡಾ. ರವಿ ಪಾಟೀಲ ತಿಳಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೋವು ಕಡಿಮೆ ಆಗಿರುವುದನ್ನು ದೃಢಪಡಿಸಿಕೊಂಡು, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಸದ್ಯ ಊಟಕ್ಕೆ ಅವರಿಗೆ ಗಂಜಿ ಕೊಡಲಾಗುತ್ತಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button