*ಬೆಳಗಾವಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋಳಿ ಹಾಗೂ ರಂಗಪಂಚಮಿ ಹಬ್ಬ-2026 ರ ಅಂಗವಾಗಿ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (1) ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಅನುಬಂಧದಲ್ಲಿ ನಮೂದಿಸಲಾದ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಬೇರೆ ಬೇರೆ ದಿವಸಗಳಂದು ರಂಗಪಂಚಮಿಯನ್ನು ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಹೋಳಿ (ಬಣ್ಣ) ಆಚರಣೆಯ ಕಾಲಕ್ಕೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಅನುಬಂಧದಲ್ಲಿ ನಮೂದಿಸಲಾದ ಬೆಳಗಾವಿ ಜಿಲ್ಲೆಯ (ಬೆಳಗಾವಿ ತಾಲೂಕು ಹೊರತುಪಡಿಸಿ) ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ಪ್ರದೇಶಗಳಲ್ಲಿ ಹಾಗೂ ಅವುಗಳ ಮುಂದೆ ನಮೂದಿಸಿದ ದಿನಾಂಕ ಹಾಗೂ ಸಮಯಗಳಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ, ಮದ್ಯ/ಬಾರ ಅಂಗಡಿಗಳನ್ನು ಬಂದ್ ಇಡುವಂತೆ ಈ ಮೂಲಕ ಆದೇಶಿಸಲಾಗಿದೆ.
ಈ ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32ರನ್ವಯ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ/ಚಿಕ್ಕೋಡಿ ಇವರು ಸದರಿ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು.
ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಒಬ್ಬ ವ್ಯಕ್ತಿ ಹೊಂದಬೇಕಾದ ಮದ್ಯ ಸಂಗ್ರಹಣೆ ಹೊರ್ತು ಪಡಿಸಿ ಹೆಚ್ಚಿನ ಸಂಗ್ರಹಣೆ ಇರದಂತೆ ಹಾಗೂ ಲೈಸನ್ಸ್ ಇಲ್ಲದ ಆವರಣಗಳಲ್ಲಿ ಸಂಗ್ರಹಣೆ ಇಡದಂತೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದಾರೆ.




