Kannada NewsKarnataka NewsLatest

*ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸಜ್ಜು*: *ಕಲಾವಿದರ ಸಮಾಗಮಕ್ಕೆ ಸಿದ್ಧತೆ, ಎರಡು ದಿನ ಶೂಟಿಂಗ್‌ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗವೂ ದಸರಾ ಸಂಭ್ರಮದ ಭಾಗವಾಗಲಿದೆ. ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸ್ಯಾಂಡಲ್‌ವುಡ್‌ನ ಹಿರಿಯ ಹಾಗೂ ಕಿರಿಯ ಕಲಾವಿದರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ದಸರಾ ಸಂಭ್ರಮದಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗವಹಿಸುವುದು ಇದೇ ಮೊದಲ ಬಾರಿಗೆ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಎಂದು ಮಂಡಳಿ ತಿಳಿಸಿದೆ.

ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಮಾತನಾಡಿ, ದಸರಾ ಸಂದರ್ಭದಲ್ಲಿ ಚಿತ್ರರಂಗದ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆ. ಎಲ್‌ಇಡಿ ಪರದೆಗಳಲ್ಲಿ ಕನ್ನಡ ಚಿತ್ರರಂಗ ನಡೆದು ಬಂದ ಹಾದಿಯನ್ನು ಪ್ರದರ್ಶಿಸಲು ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.

ಕಲಾವಿದರಿಗಾಗಿ ಎರಡು ಬಸ್‌ಗಳ ವ್ಯವಸ್ಥೆಯೂ ಇರಲಿದೆ. ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಚಿತ್ರರಂಗದಲ್ಲಿ ಚಿತ್ರೀಕರಣ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಈ ಸಂಪೂರ್ಣ ವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೋಡಿಕೊಳ್ಳಲಿದೆ ಎಂದರು.

ದಸರಾ ವೇಳೆ ಅರಮನೆ ವೀಕ್ಷಣೆಗೆ ತೆರಳುವ ಕಲಾವಿದರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಬಸ್‌ನಲ್ಲಿ ಕಲಾವಿದರನ್ನು ಕರೆದೊಯ್ಯಲಾಗುವುದು. ಅರಮನೆಯಲ್ಲಿ ಸುಮಾರು 150 ಕಲಾವಿದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮುಂಭಾಗದಲ್ಲೂ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕಲಾವಿದರ ಭದ್ರತೆಗೆ ವಿಶೇಷ ಗಮನ ನೀಡಲಾಗಿದ್ದು, ದಸರಾ ವೇಳೆ ಸುಮಾರು 15 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಬಾರಿ 45 ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವ ಇರುವುದಿಲ್ಲ. ಅದರ ಬದಲಾಗಿ ಕಲಾವಿದರಿಗೆ ಸಹಾಯಧನ ನೀಡುವಂತೆ ಸಲಹೆ ನೀಡಲಾಗಿದೆ ಎಂದು ಸಾ.ರಾ. ಗೋವಿಂದು ತಿಳಿಸಿದರು.

ಹಿರಿಯ ನಟ ಅನಂತನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಆಶಯವೂ ಇದೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ದಸರಾ ಸಂಭ್ರಮಕ್ಕೆ ಚಿತ್ರರಂಗಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ರಾಕ್‌ಲೈನ್ ವೆಂಕಟೇಶ್ ತಿಳಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿತ್ರರಂಗದ ಎಲ್ಲರೂ ದಸರಾಗೆ ಆಗಮಿಸಬೇಕು ಎಂದು ಆಹ್ವಾನಿಸಿದ್ದಾರೆ ಎಂದು ಹೇಳಿದರು.

ನಟ-ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಕರೆ ಮಾಡಿ ಆಹ್ವಾನಿಸುತ್ತಿದ್ದಾರೆ. ಈ ಬಾರಿ ದಸರಾ ಚಿತ್ರರಂಗಕ್ಕೂ ಹಬ್ಬದ ಸಂಭ್ರಮವಾಗಲಿದೆ ಎಂದು ತಿಳಿಸಿದರು.

ಸ್ಯಾಂಡಲ್‌ವುಡ್‌ನಲ್ಲಿ ಒಗ್ಗಟ್ಟಿಲ್ಲ ಎಂಬ ಮಾತು ಸರಿಯಲ್ಲ. ಚಿತ್ರರಂಗದ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ ಎಂದು ಹೇಳಿದ ವೆಂಕಟೇಶ್, ದಸರಾ ಸಂಭ್ರಮದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, ಸಾ.ರಾ. ಗೋವಿಂದು, ರಾಕ್‌ಲೈನ್ ವೆಂಕಟೇಶ್, ಭಾ.ಮ. ಹರೀಶ್, ಸುಂದರರಾಜ್, ಕೆ. ಮಂಜು, ಕಾರ್ಯದರ್ಶಿ ಎ. ಗಣೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button