*ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ತೀವ್ರಗೊಂದ ಪ್ರತಿಭಟನೆ: ನಿಷೇಧಾಜ್ಞೆ ಜಾರಿ, 11 ಮೆಟ್ರೋ ನಿಲ್ದಾಣಗಳು ಬಂದ್*

ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ಈ ನಡುವೆ ದೆಹಲಿ ಪೊಲೀಸರು ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆ ನಡೆಸದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೂರ್ವಾನುಮತಿ ಇಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದು ಅಥವಾ ಸಭೆ ನಡೆಸುವುದು, ಮೆರವಣಿಗೆ, ಪ್ರತಿಭಟನೆ, ಧರಣಿ ನಡೆಸುವುದನ್ನು ಆದೇಶದ ಅನ್ವಯ ನಿಷೇಧಿಸಲಾಗಿದೆ. ಅಲ್ಲದೇ ಘೋಷಣೆ ಕೂಗುವುದು, ಭಾಷಣ ಮಾಡುವುದು ಹಾಗೂ ಬ್ಯಾನರ್, ಫಲಕಗಳು, ಲಾಠಿ, ಕತ್ತಿ, ಕೋಲು, ಇಟ್ಟಿಗೆ, ಕಲ್ಲು ಹಾಗೂ ಇತರ ರೀತಿಯ ವಸ್ತುಗಳನ್ನು ಹೊತ್ತೊಯ್ಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆಗಾಗಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಹಾಗೂ ಸಂಚಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಭದ್ರತೆಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಅಲ್ಲದೇ ಜಂತರ್ ಮಂತರ್‌ಗೆ ಹತ್ತಿರದಲ್ಲಿರುವ 11 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರೀಕೆಡ್‌ಗಳನ್ನು ಅಳವಡಿಸಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಪ್ರತಿಭಟನೆ ನಡೆಸುತ್ತಿದ್ದ ಎಎಪಿ ನಾಯಕ ಸೌರಭ್ ಭಾರದ್ವಾಜ್ ಮತ್ತು ಪಕ್ಷದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದು, ಆಮ್ ಆದ್ಮಿ ಪಕ್ಷ, ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



