*ಶಿಕಾರಿಗೆ ತೆರಳಿದ್ದಾಗ ಮಿಸ್‌ಫೈರ್*: *ಗುಂಡೇಟಿಗೆ ಯುವಕ ಸಾವು, ಮೂವರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಶಿಕಾರಿಗೆ ತೆರಳಿದ್ದ ವೇಳೆ ಗುಂಡು ಮಿಸ್‌ಫೈರ್ ಆಗಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಘಟನೆನ ಬಳಿಕ ಮೂವರು ನಾಪತ್ತೆಯಾಗಿದ್ದು ಇನ್ನೂ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏಳು ಜನ ಸ್ನೇಹಿತರ ತಂಡ ಶಿಕಾರಿಗೆ ತೆರಳಿದ್ದರು. ಬೇಟೆ ವೇಳೆ ಪ್ರಾಣಿ ಮೇಲೆ ಗುಂಡು ಹಾರಿಸುವಾಗ ಮಿಸ್‌ಫೈರ್ ಆಗಿ ಚೇತನ್ ಎಂಬಾತ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಾಡಂಚಿನ ಕಡೇಮನೆ ಗ್ರಾಮದಲ್ಲಿ ನಡೆದಿದೆ.
ಚೇತನ್ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ಕೂಡಲೇ ಜಯಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಚೇತನ್ ಮೃತಪಟ್ಟಿದ್ದಾನೆ. ಘಟನೆ ಬಳಿಕ ಮೃತದೇಹವನ್ನು ಜಯಪುರ ಆಸ್ಪತ್ರೆಗೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಏಳು ಮಂದಿಯ ಪೈಕಿ ಚೇತನ್‌ನನ್ನು ಆಸ್ಪತ್ರೆಗೆ ಕರೆತಂದ ಮೂವರು ಯುವಕರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುಂಡು ಹಾರಿಸಿದ ಎನ್ನಲಾದ ಉಳಿದ ಮೂವರು ಯುವಕರು ಘಟನೆ ಬಳಿಕ ನಾಪತ್ತೆಯಾಗಿದ್ದಾರೆ.
ತಲೆಮರೆಸಿಕೊಂಡಿರುವ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೇಟೆಗೆ ತೆರಳಿದ್ದ ಏಳು ಮಂದಿಯ ಚಲನವಲನ ಹಾಗೂ ಶಿಕಾರಿಯ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಗುಂಡು ಉದ್ದೇಶಪೂರ್ವಕವಾಗಿ ಹಾರಿಸಲಾಗಿತ್ತೇ ಅಥವಾ ಬೇಟೆ ವೇಳೆ ಆಕಸ್ಮಿಕವಾಗಿ ಮಿಸ್‌ಫೈರ್ ಆಗಿತ್ತೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




