Kannada NewsKarnataka NewsLatest

*ಶರಣಬಸಪ್ಪ ಅಪ್ಪ ನಿಧನ*

ಪ್ರಗತಿವಾಹಿನಿ ಸುದ್ದಿ, ಕಲಬುರಗಿ:

ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಶರಣ ಬಸವೇಶ್ವರ ಮಹಾಸಂಸ್ಥಾನದ ಮಠಾಧೀಶರಾದ ಡಾ. ಶರಣಬಸಪ್ಪ ಅಪ್ಪನವರು ಲಿಂಗೈಕ್ಯರಾಗಿದ್ದಾರೆ.

ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕಲಬುರಗಿಯ ಶರಣ ಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಗುರುವಾರ (ಆಗಸ್ಟ್‌ 14) ಲಿಂಗೈಕ್ಯರಾದರು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Home add -Advt

ಇದರೊಂದಿಗೆ ನಾಡಿನ ಶರಣರ ದಾಸೋಹ ಪರಂಪರೆಯ ಜ್ಞಾನದ ಕೊಂಡಿಯೊಂದು ಕಳಚಿದಂತಾಗಿದೆ (Kalaburagi News). ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾದರು.

ಧರ್ಮಪತ್ನಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಗಂಗಾಂಬಿಕಾತಾಯಿ, ತೇಜಸ್ವಿನಿ ತಾಯಿ, ಉಮಾ ತಾಯಿ, ಗೋದು ತಾಯಿ, ಶಿವಾನಿ, ಕೋಮಲಾದೇವಿ ಹಾಗೂ ಮಹೇಶ್ವರಿ ಎಂಬ ಪುತ್ರಿಯರು ಸೇರಿ ಲಕ್ಷಾಂತರ ಭಕ್ತರನ್ನು ಅಗಲಿದ್ದಾರೆ.

ಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಜು. 25ರಂದು ರಾತ್ರಿ ಉಸಿರಾಟದ ಸೋಂಕಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿರಂತರವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ದಾಸೋಹ ಮನೆಯಲ್ಲಿಯೇ ರಾತ್ರಿ 9.23 ಗಂಟೆ ಸುಮಾರಿಗೆ ಶರಣರು ಪಾದ ಸೇರಿದರು.

ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅಂತಿಮ ಇಚ್ಛೆಯಂತೆ, ಅಪ್ಪಾಜಿ ಅವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಕರೆದೊಯ್ಯಲಾಯಿತು. ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕಿಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಮಾಡಿ, ದಾಸೋಹ ಮನೆ ಪ್ರವೇಶಿಸಿದ ನಂತರ 9.23 ಗಂಟೆ ಸುಮಾರಿಗೆ ಡಾ.ಅಪ್ಪ ಲಿಂಗೈಕ್ಯರಾದರು ಎಂದು ಮೂಲಗಳು ತಿಳಿಸಿವೆ.

ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಶರಣಬಸವೇಶ್ವರ ಮಹಾದಾಸೋಹ ಪೀಠದ 7ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಗೋದುತಾಯಿ ದಂಪತಿ ಪುತ್ರರಾಗಿ 1935ರ ನ.14ರಂದು ಜನಿಸಿದರು. ಅಧ್ಯಾತ್ಮಿಕ, ದಾಸೋಹ ವಾತಾವರಣದಲ್ಲಿ ಬೆಳೆದರು. 200 ವರ್ಷಗಳ ಮಹಾದಾಸೋಹ ಇತಿಹಾಸ ಇರುವ ಶ್ರೀ ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನ ಪೀಠಾಧಿಪತಿಗಳಾಗಿ 1983ರಲ್ಲಿ ಪೀಠಾರೋಹಣಗೈದರು. 45 ವರ್ಷಗಳಲ್ಲಿ ನಾಡಿನ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಮಾನ್ಯ ಜನರ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಗುಣಮಟ್ಟ ಉನ್ನತಿಗೆ ಶ್ರಮಿಸಿದರು.

ಪಾರಂಪರಿಕವಾಗಿ ನಡೆದ ದಾಸೋಹ ಪರಂಪರೆ ನಡೆಸಿಕೊಂಡು ಜ್ಞಾನದ ಸ್ಪರ್ಶ ನೀಡಿದರು. ಭಕ್ತರಿಗೆ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ನೀಡಿ, ಜ್ಞಾನದೀವಿಗೆಯಾದರು. ಡಾ. ಶರಣಬಸವಪ್ಪ ಅಪ್ಪ 1957ರಲ್ಲಿ ಮಾತೋಶ್ರೀ ಕೋಮಲಾದೇವಿ ಅವರನ್ನು ವಿವಾಹವಾದರು. ಧರ್ಮನಿಷ್ಠ ದಂಪತಿಗೆ ನಾಲ್ವರು ಪುತ್ರಿಯರು ಜನಿಸಿದರು. ಮಾತೋಶ್ರೀ ಕೋಮಲಾದೇವಿ 1993 ಮಾ. 23ರಂದು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರನ್ನು 1993 ನ. 30ರಂದು ವಿವಾಹವಾದರು. ದಂಪತಿಗೆ ನಾಲ್ವರು ಮಕ್ಕಳು ಜನಿಸಿದ್ದು, ನಾಲ್ಕನೇ ಮಗ ಚಿ.ದೊಡ್ಡಪ್ಪ ಅಪ್ಪ 9ನೇ ಪೀಠಾಧಿಪತಿಯಾಗಿ ಉತ್ತರಾಧಿಕಾರಿಯಾಗಿದ್ದಾರೆ.

ಶಿಕ್ಷಣವಂತ, ತತ್ವಜ್ಞಾನಿ ಡಾ. ಅಪ್ಪಾ

ವಿದ್ಯಾ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಗುರುಕುಲ ಸಂಪ್ರದಾಯದಲ್ಲಿ ಮಹಾದಾಸೋಹ ಮಹಾಮನೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ನೂತನ ವಿದ್ಯಾಲಯ ಶಾಲೆಯಲ್ಲಿ ಶಿಕ್ಷಣ ಪಡೆದರು. ಕಲಬುರಗಿಯ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಾ. ಡಿ.ಸಿ. ಪಾವಟೆ ಮಾರ್ಗದರ್ಶನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ತತ್ವಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದರು.

ನಾಡಿನ ಶೈಕ್ಷಣಿಕ ಕ್ರಾಂತಿಯ ಹರಿಕಾರ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಉಸ್ತುವಾರಿ ವಹಿಸಿಕೊಂಡು ಎಲ್‌​ಕೆಜಿಯಿಂದ ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆವರೆಗೆ ಶ್ರಮಿಸಿದರು. 1971ರಲ್ಲಿ ಸಾರ್ವಜನಿಕ ಶಾಲಾ ವ್ಯವಸ್ಥೆ ಮಾದರಿಯಲ್ಲಿ ಶರಣಬಸವೇಶ್ವರ ವಸತಿ ಶಾಲೆ ಪ್ರಾರಂಭಿಸಿದರು. ನಾಯಕತ್ವದಲ್ಲಿ 5 ಸಾವಿರ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸುವ ಮತ್ತು ವೃತ್ತೀಜಿವನವನ್ನು ರೂಪಿಸಿಕೊಳ್ಳುವ ದೈತ್ಯ ವೃಕ್ಷವಾಗಿ ಬೆಳೆದಿದೆ.

ಶರಣ ಬಸಪ್ಪ ಅಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

ಬಸವಾದಿ ಶರಣರು ತೋರಿದ ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಡೆಯುತ್ತಾ, ಸಮಾಜದ ಏಳಿಗೆಗಾಗಿ ಸದಾ ತುಡಿಯುತ್ತಿದ್ದ ನಿಜ ಬಸವಾನುಯಾಯಿ ಶರಣಬಸಪ್ಪ ಅಪ್ಪನವರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ, ಗುರುಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

https://twitter.com/dkshivakumar/status/1956052715575914555?s=46

ಕಲಬುರಗಿಯ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದ ಮಠಾಧೀಶರು, ಮಹಾದಾಸೋಹಿಗಳೂ ಆಗಿದ್ದ ಪರಮಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವುಂಟಾಯಿತು.

ಶರಣರ ನಾಡಿನಲ್ಲಿ ಸಮಾಜ ಸುಧಾರಣೆ, ಧಾರ್ಮಿಕ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡಿ ಶರಣರ ಆಶಯದಂತೆ ಬದುಕಿ ಬಾಳಿದ ಪರಮಪೂಜ್ಯರ ನಿರ್ಗಮನವು ನಾಡಿಗೆ ಬಹುದೊಡ್ಡ ನಷ್ಟ.

ಆ ಪರಮ ಶಿವನ ಕೃಪೆಯಿಂದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.- ಕುಮಾರಸ್ವಾಮಿ

ಡಾ. ಶರಣ ಬಸಪ್ಪ ಅಪ್ಪ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ

: ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿಗಳು, ಶರಣಬಸವೇಶ್ವರ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾಗಿದ್ದ ಡಾ. ಶರಣ ಬಸಪ್ಪ ಅಪ್ಪ ಅವರು ಲಿಂಗೈಕ್ಯರಾಗಿದ್ದು, ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಸೇರಿದ ಕಲಬುರ್ಗಿಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಕೀರ್ತಿ ಶರಣ ಬಸವೇಶ್ವರ ಮಹಾ ದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರಿಗೆ ಸಲ್ಲುತ್ತದೆ. ಡಾ.ಅಪ್ಪ ಅವರ ನಿಧನದಿಂದ ವೀರಶೈವ ಲಿಂಗಾಯತ ಸಮಾಜದ ದೊಡ್ಡ ಕೊಂಡಿಯೇ ಕಳಚಿದೆ ಎಂದು ತಿಳಿಸಿದ್ದಾರೆ.
ಕೇವಲ ಬೆರಳೆಣಿಕೆಯ ವಿದ್ಯಾರ್ಥಿನಿಯರಿಂದ ಆರಂಭವಾದ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲೆಯನ್ನು, ಹೆಮ್ಮರವಾಗಿ ಬೆಳೆದಿದ ಅವರು, ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ನೆರವಾದರು. ಅವರ ವಿದ್ಯಾಸಂಸ್ಥೆಯಲ್ಲಿ ಓದಿದ ಹಲವರು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಡಾ. ಶರಣ ಬಸವಪ್ಪ ಅಪ್ಪ ಅವರು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ..
ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲು ಕಲ್ಪಿಸಿದ್ದ ಅವರು, ಮಹಿಳೆಯರಿಗೋಸ್ಕರವೇ ಎಂಜಿನಿಯರಿಂಗ್ ಕಾಲೇಜು ತೆರೆದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಹೆಣ್ಣು ಮಕ್ಕಳು ಶಿಕ್ಷಿತರಾಗಿ ಸಬಲರಾಗಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಸಮಾಜವನ್ನು ಒಗ್ಗೂಡಿಸಲು ಶ್ರಮಿಸಿದ್ದ ಅವರು ಸಮುದಾಯಕ್ಕೆ ನೀಡಿರುವ ಕೊಡುಗೆಯೂ ಅನುಪಮವಾದ್ದು. ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ನೀಡಲಿ, ಅವರ ಅಪಾರ ಅಭಿಮಾನಿಗಳು, ಭಕ್ತರು, ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಈಶ್ವರ ಖಂಡ್ರೆ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Related Articles

Back to top button