ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಚಲನಚಿತ್ರ ರಂಗದ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜನ್, ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜನ್ ಅವರು ಕನ್ನಡ ಮಾತ್ರವಲ್ಲ ತೆಲುಗು ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಭಾಷೆಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದರು. ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ‘ರಾಜನ್-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು.
ಮಂತ್ರಾಲಯ ಮಹಾತ್ಮೆ’, ‘ಗಂಧದ ಗುಡಿ’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ಆಟೋ ರಾಜ’, ‘ಗಾಳಿಮಾತು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’ ಹೀಗೆ ಹಲವು ಚಿತ್ರಗಳಿಗೆ ರಾಜನ್ ಸಂಗೀತ ನಿರ್ದೇಶನ ಮಾಡಿದ್ದರು.
ರಾಜನ್ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದು, ರಾಜನ್ ನಿಧನ ಸುದ್ದಿ ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.
ಕನ್ನಡ ಚಲನಚಿತ್ರ ರಸಿಕರು ಎಂದಿಗೂ ಮರೆಯಲಾರದ ತಮ್ಮ ನೂರಾರು ಸುಮಧುರ ಗೀತೆಗಳ ಮೂಲಕ ಶ್ರೀ ರಾಜನ್ ಅವರು ಸದಾ ನಮ್ಮ ನೆನಪಿನಲ್ಲಿ ಇರುತ್ತಾರೆ.
ದಿವಂಗತ ರಾಜನ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬದ ಸದಸ್ಯರಿಗೆ ಮತ್ತು ಅಪಾರ ಸಂಗೀತ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ